ವೈದ್ಯಾಧಿಕಾರಿಯಾಗಿ ಡಾ. ಎಲ್ದೋಸ್ ಮುಂದುವರಿಕೆ

ಎನ್.ಆರ್.ಪುರ: ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಯಾಗಿ ಡಾ. ಎಲ್ದೋಸ್ ಮುಂದುವರಿಯಲಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಡಾ. ಎಲ್ದೋಸ್ ಅವರ ವಿರುದ್ಧ ಸಿಬ್ಬಂದಿ ಪ್ರಕರಣ ದಾಖಲಿಸಿರುವ ಕುರಿತು ಜಿಲ್ಲಾ ವೈದ್ಯಾಧಿಕಾರಿ ಹಾಗೂ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ. ಪ್ರಸೂತಿ ತಜ್ಞರು ರಜೆ ಮೇಲೆ ಇರುವುದರಿಂದ ಆಸ್ಪತ್ರೆಯಲ್ಲಿ ತೊಂದರೆಯಾಗಬಾರದು ಎಂದು ಡಾ. ಎಲ್ದೋಸ್​ಗೆ ಸೂಚಿಸಲಾಗಿದೆ. ತಾಲೂಕು ವೈದ್ಯಾಧಿಕಾರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ ಜವಾಬ್ದಾರಿಯನ್ನು ಡಾ. ವೀರಪ್ರಸಾದ್​ಗೆ ವಹಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಸ್ಪತ್ರೆ ಸಿಬ್ಬಂದಿ ತೊಂದರೆಯಾದರೆ ಆಡಳಿತ ಮಂಡಳಿ, ಜಿಲ್ಲಾ ವೈದ್ಯಾಧಿಕಾರಿ ಜತೆ ರ್ಚಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ರೋಗಿಗಳೊಂದಿಗೆ ಸರಿಯಾಗಿ ಸ್ಪಂದಿಸದ ವೈದ್ಯರು, ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಡಯಾಲಿಸಿಸ್​ಗೆ ಶುಲ್ಕ ಪಡೆಯುತ್ತಿರುವುದು ಹಾಗೂ ಔಷಧಗಳನ್ನು ಹೊರಗಡೆಯಿಂದ ತರಲು ಬರೆದುಕೊಡುತ್ತಿರುವ ಬಗ್ಗೆ ದೂರು ಕೇಳಿಬಂದಿದೆ. ಈ ಬಗ್ಗೆ ಶೀಘ್ರದಲ್ಲಿ ಕ್ರಮಕೈಕೊಳ್ಳಲಾಗುವುದು ಎಂದು ತಿಳಿಸಿದರು.

ನಿಫಾ ಬಗ್ಗೆ ಹೆಚ್ಚು ಜಾಗೃತಿ: ಕೇರಳದಲ್ಲಿ ನಿಫಾ ವೈರಸ್ ಹಾವಳಿ ಹೆಚ್ಚಾಗಿದ್ದು, ಕೇರಳದ ಬಹುತೇಕ ಜನರು ಇಲ್ಲಿಗೆ ವಲಸೆ ಬರುತ್ತಿರುವುದರಿಂದ ಜಿಲ್ಲೆಯಲ್ಲಿ ನಿಫಾ ವೈರಸ್ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿ ಹಾಗೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಲಾಗಿದೆ. ಜನರೂ ಮುನ್ನೆಚ್ಚರಿಕೆ ವಹಿಸಬೇಕು. ಜ್ವರ ಬಂದ ಕೂಡಲೇ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಟಿ.ಡಿ.ರಾಜೇಗೌಡ ಹೇಳಿದರು.

Leave a Reply

Your email address will not be published. Required fields are marked *