More

    ರೈತರಿಗೆ ಶಾಶ್ವತ ಯೋಜನೆ ಕಲ್ಪಿಸಿ: ಶಾಸಕ ಎಸ್.ಆರ್.ಶ್ರೀನಿವಾಸ್

    ಪಟ್ಟನಾಯಕನಹಳ್ಳಿ: ಅನ್ನದಾತನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡುವ ಕಿಸಾನ್ ಸಮ್ಮಾನ್ ಯೋಜನೆಯ 2 ಸಾವಿರ ರೂಪಾಯಿ ಯಾವುದಕ್ಕೂ ಸಾಲುವುದಿಲ್ಲ, ರೈತನಿಗೆ ಶಾಶ್ವತ ಆರ್ಥಿಕ ಭದ್ರತೆ ನೀಡುವ ನೀರು ಮತ್ತು ವಿದ್ಯುತ್ ಸಮರ್ಪಕವಾಗಿ ನೀಡಿದರೆ ಬಾಳು ಬಂಗಾರವಾಗಲಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.

    ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ವಸ್ತು ಪ್ರದರ್ಶನ ವೇದಿಕೆಯಲ್ಲಿ ಸೋಮವಾರ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಮೇಳ ಹಾಗೂ ಜಿಲ್ಲೆಯ 10 ತಾಲೂಕಿನ ರೈತರ ಸಮಾವೇಶ, ಸಮಗ್ರ ಕೃಷಿ ಪದ್ಧತಿಗಳು ಹಾಗೂ ನೈಸರ್ಗಿಕ ಕೃಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕಳೆದ ವರ್ಷ ಉತ್ತಮ ಮಳೆಯಾಗಿ ಹೇಮಾವತಿ ಡ್ಯಾಂ ಭರ್ತಿಯಾಗಿ 6 ತಿಂಗಳು ಕೆರೆಗಳಿಗೆ ನೀರು ಹರಿದಿದ್ದರೂ ನಮ್ಮ ವೋಟ್ ಬ್ಯಾಂಕ್ ಸ್ವಾರ್ಥ ರಾಜಕೀಯ, ಇಚ್ಚಾಶಕ್ತಿ ಕೊರತೆಯಿಂದ ಕೆರೆಗಳನ್ನು ತುಂಬಿಸುವಲ್ಲಿ ವಿಫಲವಾಗಿದ್ದೇವೆ. ಹೇಮಾವತಿ ಕಾಲುವೆ ವಿಸ್ತೀರ್ಣವಾಗದ ಕಾರಣ ಡ್ಯಾಂನಲ್ಲಿನ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗಿದೆ. ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 115 ಟಿಎಂಸಿ ನೀರಿನ ಅವಶ್ಯಕತೆ ಇದ್ದು, ಸರ್ಕಾರ ಹೇಮಾವತಿ ನಾಲಾ ಆಧುನಿಕರಣಕ್ಕೆ ಮುತ್ವರ್ಜಿ ವಹಿಸುವ ಅಗತ್ಯವಿದೆ ಎಂದರು.

    ಸಮಗ್ರ ಕೃಷಿ ಪದ್ಧತಿಗಳು ಹಾಗೂ ನೈಸರ್ಗಿಕ ಕೃಷಿ ಬಗ್ಗೆ ಜಿಕೆವಿಕೆ ಕೃಷಿ ಬೇಸಾಯ ಶಾಸ್ತ್ರ ಪ್ರಾಧ್ಯಾಪಕ ಅಂದಾನಿಗೌಡ ಉಪನ್ಯಾಸ ನೀಡಿದರು. ಮಧುಗಿರಿ ವಿಭಾಗಉಪ ಕೃಷಿ ನಿರ್ದೇಶಕ ಟಿ.ಎಸ್.ಅಶೋಕ್, ಸಹಾಯಕ ಕೃಷಿ ನಿರ್ದೇಶಕರಾದ ಆರ್.ರಂಗನಾಥ್, ಡಾ.ಎಚ್.ನಾಗರಾಜು, ಕೃಷಿ ಅಧಿಕಾರಿಗಳಾದ ಎಂ.ರಾಹುಲ್, ಸುರೇಶ್ ನಲ್ಲೂರು, ಮಂಜುನಾಥ್, ಗೋವಿಂದಪ್ಪ ಸೇರಿ ರೈತರು ಇದ್ದರು.

    ಬೆಳೆಗೆ ಸೂಕ್ತ ಬೆಲೆ, ಮಾರುಕಟ್ಟೆ ನೀಡಿ: ಕೃಷಿಗಾಗಿ ಸಾಲ ಮಾಡದಂತೆ ಯೋಜನೆಗಳನ್ನು ಸರ್ಕಾರ ರೂಪಿಸಿ ದುಡಿಯುವ ಕೈಗೆ ಕೆಲಸ ಕೊಟ್ಟು, ಬೆಳೆಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ನೀಡಿದರೆ ರೈತನ ಆರ್ಥಿಕ ಪ್ರಗತಿ ಸಾಧ್ಯ. ಎತ್ತಿನಹೊಳೆ, ಭದ್ರಾ ನೀರಾವರಿ ಯೋಜನೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಿದರೆ ರೈತನ ಬದುಕಿನಲ್ಲಿ ಭರವಸೆ ಮೂಡಲಿದೆ ಎಂದು ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts