ಶಾಸಕ ರೋಷನ್​ ಬೇಗ್​ ಅಮಾನತಿನ ಬಗ್ಗೆ ಡಿ.ಕೆ.ಶಿವಕುಮಾರ್​ಗೆ ಯಾರೋ ಹೇಳಿದರಂತೆ!..

ದೆಹಲಿ: ಶಾಸಕ ರೋಷನ್ ಬೇಗ್ ಅಮಾನತು ಮಾಡಿರುವ ಬಗ್ಗೆ ನನಗೆ ಗೊತ್ತಿರಲಿಲ್ಲ. ಈಗ ಯಾರೋ ಹೇಳಿದ್ದರಿಂದ ತಿಳಿಯಿತು ಎನ್ನುವ ಮೂಲಕ ರೋಷನ್​ ಬೇಗ್​ ಅವರ ಅಮಾನತಿನ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್​ ಜಾಣತನದ ಉತ್ತರ ನೀಡಿದ್ದಾರೆ.

ರಾಹುಲ್​ಗಾಂಧಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿ ಶುಭ ಕೋರಿದ ಬಳಿಕ ಮಾತನಾಡಿದ ಅವರು, ನಾವೆಲ್ಲಾ ಕಾಂಗ್ರೆಸ್​ ಪಕ್ಷದವರು. ನಾವು ಗಾಂಧಿ ಕುಟುಂಬ, ಕಾಂಗ್ರೆಸ್​ಗೆ ನಿಷ್ಠೆಯುಳ್ಳವರು. ಪಕ್ಷದಲ್ಲಿ ವ್ಯಕ್ತಿ ನಿಷ್ಠೆ ಇರಬಾರದು, ಪಕ್ಷ ನಿಷ್ಠೆ ಇರಬೇಕೆಂದು ಮೊದಲಿನಿಂದಲೂ ಹೇಳುತ್ತಿದ್ದೇನೆ ಎಂದರು. ರೋಷನ್​ ಬೇಗ್​ ಅವರು ನೀಡಿದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಎರಡು ವಿಭಾಗವಾಗಿದ್ದು ಒಂದು ಇಂಡಿಯಾ ಕಾಂಗ್ರೆಸ್, ಮತ್ತೊಂದು ಸಿದ್ದು ಕಾಂಗ್ರೆಸ್ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಸಿದ್ದರಾಮಯ್ಯ ನಮ್ಮ ಸಿಎಲ್​ಪಿ ನಾಯಕರು. ಅವರಿಗೆ ಎಷ್ಟು ಗೌರವ ನೀಡಬೇಕೋ ಅಷ್ಟನ್ನು ನೀಡಲೇಬೇಕು. ಹಾಗೆಯೇ ಪಕ್ಷದ ಅಧ್ಯಕ್ಷರಿಗೂ ನೀಡಬೇಕು. ಶಾಸಕರಿಗೂ ಗೌರವ ನೀಡಲೇಬೇಕು. ಹಾಗೆಯೇ ಪಕ್ಷದಲ್ಲಿ ಶಿಸ್ತು ಕಾಪಾಡುವುದು ಅನಿವಾರ್ಯ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀವೇ ಅಧ್ಯಕ್ಷರಾಗಿರಬೇಕೆಂದು ಕೇಳಿಕೊಂಡಿದ್ದೇನೆ. ರಾಹುಲ್ ಗಾಂಧಿ ನಾಯಕತ್ವ ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿದೆ ಎಂದು ಇದೇ ವೇಳೆ ತಿಳಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *