ಮಂಡ್ಯ: ಡಿ.20ರಿಂದ 22ರವರೆಗೆ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ರವಿಕುಮಾರ್ ಗಣಿಗ ಒತ್ತಾಯಿಸಿದರು.
ಬುಧವಾರ ಅಧಿವೇಶನದಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಕೆಲವೇ ದಿನವಷ್ಟೇ ಬಾಕಿ ಉಳಿದಿದೆ. ಆದ್ದರಿಂದ ತ್ವರಿತವಾಗಿ ಅನುದಾನ ಬಿಡುಗಡೆ ಮಾಡಬೇಕು. ಅದರಿಂದ ಮುಂದಿನ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಮಾತನಾಡಲಾಗಿದೆ. ಅಂತೆಯೇ ಜು.25ರಂದು ಮಧ್ಯಾಹ್ನ 1 ಗಂಟೆಗೆ ಮಂಡ್ಯ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಸಭೆ ಆಯೋಜಿಸಲಾಗಿದ್ದು, ಹಲವು ವಿಷಯದ ಬಗ್ಗೆ ಚರ್ಚೆ ಮಾಡಲಾಗುವುದು. ಇನ್ನು ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಅಧ್ಯಕ್ಷರೇ ಗಾಣಿಗ ಅಲ್ಲ ಗಣಿಗ ಎಂದ ಶಾಸಕ: ಅಧಿವೇಶನದಲ್ಲಿ ಶಾಸಕ ರವಿಕುಮಾರ್ ಅವರ ಹೆಸರಿನ ಬಗ್ಗೆ ಚರ್ಚೆಯಾಗಿ ಹಾಸ್ಯ ಚಟಾಕಿ ಹಾರಿಸಿದ ಪ್ರಸಂಗ ನಡೆಯಿತು. ಸ್ಪೀಕರ್ ಯು.ಟಿ.ಖಾದರ್ ಸದನದಲ್ಲಿ ಪ್ರಶ್ನೋತ್ತರ ಕೇಳುವಂತೆ ರವಿಕುಮಾರ್‌ಗೆ ಸೂಚಿಸಿದರು. ಈ ವೇಳೆ ಗಾಣಿಗ ಎಂದು ಕೂಗಿದರು. ಇದಕ್ಕೆ ಆಕ್ಷೇಪಿಸಿದ ರವಿಕುಮಾರ್, ಅಧ್ಯಕ್ಷರೇ ಗಾಣಿಗ ಅಲ್ಲ ಗಣಿಗ ಎಂದಾಗ ಕಾಲೆದರು. ಈ ಸಮಯದಲ್ಲಿ ಶಾಸಕರೊಬ್ಬರು ದನಿಗೂಡಿಸಿ, ಅಧ್ಯಕ್ಷರೇ ನಿಮಗೆ ಕನ್ನಡ ಅನುವಾದ ಮಾಡಲು ಮತ್ತೊಬ್ಬರನ್ನು ನೇಮಿಸಬೇಕಿದೆ ಎಂದಾಗ ಸದನ ನಗೆಗಡಲಲ್ಲಿ ತೇಲಿತು.