More

    ಬೆಳೆದು ನಿಂತಿರುವ ಬೆಳೆಗೆ ನೀರು ಕೊಡ್ತೀವಿ: ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಭರವಸೆ

    ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಬೇಕೆಂದು ನೀಡಿರುವ ಆದೇಶದಿಂದ ಆತಂಕಕ್ಕೆ ಒಳಗಾಗುವುದ ಬೇಡ. ಕುಡಿಯುವ ನೀರು ಹಾಗೂ ಬೆಳೆದು ನಿಂತಿರುವ ಬೆಳೆಗೆ ನೀರು ಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಭರವಸೆ ನೀಡಿದರು.
    ಈಗಾಗಲೇ ಭರವಸೆ ನೀಡಿರುವಂತೆ ಕಟ್ಟು ಪದ್ಧತಿಯಲ್ಲಿ ಬೆಳೆಗೆ ನೀರು ಕೊಡಲಾಗುವುದು. ಇನ್ನು ಜಿಲ್ಲೆಯಲ್ಲಿ ಸಂಘಟನೆಗಳು ನಡೆಸುವ ಪ್ರತಿಭಟನೆಗೆ ನಮ್ಮ ಬೆಂಬಲವಿದೆ. ಆದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಮೂಲಕ ನಮ್ಮ ಧ್ವನಿಯನ್ನು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರಕ್ಕೆ ತಲುಪಿಸುವಂತೆ ನೋಡಿಕೊಳ್ಳಬೇಕಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
    ಪ್ರತಿದಿನ 24 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ತಿಳಿಸಿದ್ದ ಕಾವೇರಿ ನೀರು ನಿರ್ವಹಣಾ ಸಮಿತಿಯ ಸದಸ್ಯರಿಗೆ ನಮ್ಮ ಸರ್ಕಾರ ಮತ್ತು ವಕೀಲರು ಮನವರಿಕೆ ಮಾಡಿದ ನಂತರ 10 ಸಾವಿರ ಕ್ಯೂಸೆಕ್‌ಗೆ ಇಳಿಕೆ ಮಾಡಿದರು. ಈ ನಿಟ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸಲಾಗಿದೆ. ಇಲ್ಲದಿದ್ದರೆ ಪ್ರತಿದಿನ 24 ಸಾವಿರ ಕ್ಯೂಸೆಕ್ ನೀರು ಬಿಡಬೇಕಿತ್ತು. ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರು, ಹಾರಂಗಿ, ಗೊರೂರು, ಹೇಮಾವತಿ, ಕನ್ನಂಬಾಡಿ ಜಲಾಶಯದಿಂದ ಸೋರಿಕೆಯಾಗುವ ನೀರು 3 ರಿಂದ 4 ಸಾವಿರ ಕ್ಯೂಸೆಕ್ ಆಗುತ್ತದೆ. ಕೆಆರ್‌ಎಸ್ ಜಲಾಶಯದಿಂದ 1 ಸಾವಿರ ಕ್ಯೂಸೆಕ್ ನೀರು ಮಾತ್ರ ಬಿಡಲಾಗುತ್ತಿದೆ. ಆದ್ದರಿಂದ ಕೆಆರ್‌ಎಸ್ ಡ್ಯಾಂನಿಂದಲೇ 5 ಸಾವಿರ ಕ್ಯೂಸೆಕ್ ನೀರು ಬಿಡುತ್ತಿದ್ದಾರೆಂದು ಆತಂಕಗೊಳ್ಳುವುದು ಬೇಡ ಎಂದು ವಿವರಿಸಿದರು.
    ಈ ಹಿಂದೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಳೆ ಬರುವ ಆಶಾಭಾವನೆಯಿಂದ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವ ತೀರ್ಮಾನವನ್ನು ಮಾಡಿದ್ದೆವು. ಆದರೆ ಜೂನ್, ಜುಲೈನಲ್ಲಿ ಮಳೆ ಬರಲಿಲ್ಲ. ಆಗಸ್ಟ್‌ನಲ್ಲಿ ಮಳೆ ಬಂದರೂ ಸೆಪ್ಟಂಬರ್‌ನಲ್ಲಿ ಕೈಕೊಟ್ಟಿತು. ಇದರಿಂದಾಗಿ ಪ್ರಾಧಿಕಾರ ಹಾಗೂ ಸಮಿತಿ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಲು ಆಗಲಿಲ್ಲ. ಸಂಕಷ್ಟದ ಸಂದರ್ಭದಲ್ಲೂ ನೀರು ಹರಿಸಬೇಕೆನ್ನುವ ವಾದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆದು ಚರ್ಚಿಸಿದ್ದೇವೆ. ನಂತರ ದೆಹಲಿಯಲ್ಲಿ ಸರ್ವಪಕ್ಷಗಳ ಸಂಸದರ ಸಭೆ ನಡೆಸಿ ಕಾವೇರಿ ನದಿ ನೀರು ಬಿಡದಂತೆ ಎಲ್ಲ ಪ್ರಯತ್ನ ಮಾಡಿದ್ದೇವೆ. ಆದರೆ ಸುಪ್ರೀಂಕೋರ್ಟ್ ನೀರು ಹರಿಸುವಂತೆ ಆದೇಶ ನೀಡಿರುವುದು ಆಘಾತ ತಂದಿದೆ. ವಿಪಕ್ಷಗಳು ನೀರು ಹರಿಸಬಾರದೆಂದು ಹೇಳುವುದು ಸಹಜ. ಆದರೆ ಎಲ್ಲ ಸರ್ಕಾರಗಳು ಕಾನೂನಾತ್ಮಕವಾಗಿಯೇ ನೀರು ಹರಿಸಿವೆ ಎಂದು ಹೇಳಿದರು.
    ಮಂಡ್ಯ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ನಮ್ಮ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿದ ನಂತರ ನೀರು ಬಿಡಲ್ಲ ಎಂದು ನಿರ್ಣಯ ತೆಗೆದುಕೊಂಡು ಅದರಂತೆ ತ.ನಾಡಿಗೆ ನೀರು ನಿಲ್ಲಿಸಿದ್ದೆವು. ಆದರೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶದಂತೆ ನಡೆದುಕೊಳ್ಳದಿದ್ದರೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿಯೇ ನೀರು ಹರಿಸಲೇಬೇಕಾದ ಒತ್ತಡಕ್ಕೆ ಸರ್ಕಾರ ಒಳಗಾಗಬೇಕಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ಕೇಳಿದರು. ಅವರು ಇನ್ನೂ ಸಮಯ ನೀಡಿಲ್ಲ ಎಂದು ಆರೋಪಿಸಿದರು.
    ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ದೆಹಲಿಯಲ್ಲಿ ಮೂರು ದಿನ ಮಾತುಕತೆ ನಡೆಸಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಕೇಳಿದರೆ ಪ್ರಧಾನಿ ಮೋದಿ ಅವರು ಸಮಯ ನೀಡುತ್ತಾರೆ. ಹಾಗಾಗಿ ದೇವೇಗೌಡರೇ ಕಾವೇರಿ ವಿಚಾರವನ್ನು ಪ್ರಧಾನಿ ಬಳಿ ಚರ್ಚಿಸಬೇಕು. ಸಂಸದೆ ಅವರು ಮಂಡ್ಯದಲ್ಲಿ ಸಭೆ ಮಾಡುವುದನ್ನು ಬಿಟ್ಟು, ದೆಹಲಿಯಲ್ಲಿ ಎಲ್ಲ ಸಂಸದರ ಜತೆಗೂಡಿ ಮೋದಿ ಅವರನ್ನು ಭೇಟಿ ಮಾಡಿ ಕಾವೇರಿ ವಿಚಾರದಲ್ಲಿ ಮಧ್ಯಪ್ರವೇಶಸುವಂತೆ ಮನವಿ ಮಾಡಲಿ ಎಂದು ಆಗ್ರಹಿಸಿದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಮುಖಂಡರಾದ ರುದ್ರಪ್ಪ, ಸಿ.ಎಂ.ದ್ಯಾವಪ್ಪ, ಸುರೇಶ್, ನಗರಸಭಾ ಸದಸ್ಯ ಶ್ರೀಧರ್ ಉಪಸ್ಥಿತರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 27

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts