ಮೋದಿ ಸೋಲಿಗೆ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ

ಶೃಂಗೇರಿ: ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಸೋಲಿಸಲು ಬೇರೆ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದಲ್ಲಿ ಶನಿವಾರ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಮೋದಿ ಸರ್ಕಾರ ನೀಡಿದ ಭರವಸೆಗಳು ಈಡೇರಿಲ್ಲ ಯುವಕರಿಗೆ ನೀಡಿದ ಉದ್ಯೋಗ ಭರವಸೆ ಕೇವಲ ಭರವಸೆಯಾಗಿ ಉಳಿದಿದೆ. ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.

ಸ್ವಚ್ಛ ಭಾರತದ ಯೋಜನೆಯಡಿ ಕೋಟಿಗಟ್ಟಲೆ ಹಣ ದುರುಪಯೋಗವಾಗಿದೆ. ಫುಲ್ವಾಮ ಘಟನೆ ದೇಶದ ದುರ್ಬಲ ಭದ್ರತೆಗೆ ಸಾಕ್ಷಿಯಾಗಿದೆ. ದೇಶದಲ್ಲಿ ಅದಾನಿ, ಅಂಬಾನಿ, ನೀರವ್ ಮೋದಿ, ವಿಜಯ್ ಮಲ್ಯ ಮುಂತಾದ ಶ್ರೀಮಂತರನ್ನು ಮಾತ್ರ ಮೋದಿ ಸರ್ಕಾರ ಬೆಳೆಸುತ್ತಿದೆ ಎಂದರು.

ಮಲೆನಾಡಿನ ಯಾವುದೇ ಸಮಸ್ಯೆಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಸ್ಪಂದಿಸಿಲ್ಲ. ಕೋಮುಗಲಭೆಗಳು ನಡೆದಾಗ ಬಂದು ಕೂಗಾಡುವವರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಸಂಸದೆಯಾಗಿ ಕೇವಲ ನಾಲ್ಕಾರು ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಇದರಿಂದ ಅವರ ಪಕ್ಷದ ಕಾರ್ಯಕರ್ತರೆ ಗೋ ಬ್ಯಾಕ್ ಶೋಭಾ ಎನ್ನುತ್ತಿದ್ದಾರೆ ಎಂದು ದೂರಿದರು.

ಮೈತಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಸಾಮಾಜಿಕ ಕಾಳಜಿ ಉಳ್ಳವರಾಗಿದ್ದಾರೆ. ಅವರಿಗೆ ಮತ ನೀಡುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಜಿ.ಜಿ.ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಸ್ತೆ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದೆ. ರೈತರ ಪರ ಕಾಳಜಿ ಇರುವ ಸಮ್ಮಿಶ್ರ ಸರ್ಕಾರ ಸಾಲಮನ್ನಾ ಮಾಡುವ ಪತ್ರವನ್ನು ಪ್ರತಿಯೊಬ್ಬ ರೈತರಿಗೆ ತಲುಪಿಸಿದ್ದಾರೆ. ಏಪ್ರಿಲ್ 1ರ ಸೋಮವಾರ ಮಧ್ಯಾಹ್ನ 2ಗಂಟೆಗೆ ಎರಡು ಪಕ್ಷದ ಕಾರ್ಯಕರ್ತರು ಆದಿಚುಂಚನಗಿರಿ ಸಮುದಾಯಭವನದಲ್ಲಿ ನಡೆಯುವ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಬೇಕು ಎಂದರು.

Leave a Reply

Your email address will not be published. Required fields are marked *