ಭದ್ರತಾ ವ್ಯವಸ್ಥೆ ರಾಜಕೀಯಕ್ಕೆ ದುರ್ಬಳಕೆ

ಎನ್.ಆರ್.ಪುರ: ದೇಶದ ಭದ್ರತಾ ವ್ಯವಸ್ಥೆಯನ್ನು ರಾಜಕೀಯಕ್ಕಾಗಿ ಬಳಸಿಕೊಂಡ ದೇಶದ ಮೊದಲ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಎಂಎಡಿಬಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಆರೋಪಿಸಿದರು.

ಮೆಣಸೂರಲ್ಲಿ ಗುರುವಾರ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ದೇಶದ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ ಎಂದು ದೂರಿದರು.

ಇಂದಿರಾ ಗಾಂಧಿ ಅವಧಿಯಲ್ಲಿ ಪಾಕಿಸ್ತಾನದ ಮೇಲೆ ನಡೆಸಿದ ಯುದ್ಧ, ಅಟಲ್ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಕಾರ್ಗಿಲ್ ಯುದ್ಧ , ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ಯಾರೂ ರಾಜಕೀಯವಾಗಿ ಬಳಸಿಕೊಂಡಿರಲಿಲ್ಲ. ಭದ್ರತಾ ವೈಫಲ್ಯದಿಂದಾಗಿ ನಡೆದ ಪುಲ್ವಾಮಾ ದಾಳಿಯಲ್ಲಿ ಸೈನಿಕರು ಹುತಾತ್ಮರಾಗಿರುವ ವಿಚಾರವನ್ನು ಮೋದಿ ಅವರು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು

ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ವಿದರ್ಭ ಪ್ಯಾಕೇಜ್​ನಡಿ ರೈತರ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದೆ. ಪ್ರಸ್ತುತ ಮೈತ್ರಿ ಸರ್ಕಾರ ರೈತರ 46 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದೆ. ಆದರೆ ಮೋದಿ ಅವರು ದೇಶದ ಚೌಕಿದಾರ ಎಂದು ಸ್ವಯಂ ಪ್ರೇರಿತವಾಗಿ ಹೇಳಿಕೊಳ್ಳುವ ಮೂಲಕ ಬಡವರು, ಯುವ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ 1800 ಜನ, ವರ್ಕಾಟೆ ಗ್ರಾಮದ 850 ಅರಣ್ಯವಾಸಿಗಳಿಗೆ ಹಕ್ಕುಪತ್ರ ಸಿಗದಿರಲು ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕರೇ ನೇರ ಹೊಣೆ ಎಂದು ದೂರಿದರು.

ಪ್ರಮುಖರಾದ ಡಾ. ಕೆ.ಪಿ.ಅಂಶುಮಂತ್, ಚಂದ್ರಶೇಖರ್, ಪಿ.ಆರ್.ಸದಾಶಿವ, ಉಪೇಂದ್ರ, ಸಿಜು, ಎಸ್.ಡಿ.ರಾಜೇಂದ್ರ, ಪಾಪಚ್ಚ, ಬಿನು, ಸಂಜಯ್, ಕಿರಣ್,ಅಬೂಬಕರ್ ಇತರರಿದ್ದರು.

Leave a Reply

Your email address will not be published. Required fields are marked *