ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ

ಹಾಸನ: ನಗರ ಹೊರವಲಯದ ಬಿ. ಕಾಟಿಹಳ್ಳಿ ಪೊಲೀಸ್ ಬಡಾವಣೆಗೆ ಭೇಟಿ ನೀಡಿದ ಶಾಸಕ ಪ್ರೀತಂ ಜೆ.ಗೌಡ ಸ್ಥಳೀಯರ ಅಹವಾಲು ಸ್ವೀಕರಿಸಿದರು.

ಪೊಲೀಸ್ ಬಡಾವಣೆ ನಿರ್ಮಾಣದ ಬಳಿಕ ರಸ್ತೆ ವ್ಯವಸ್ತೆ ಇಲ್ಲ. ಒಳಚರಂಡಿ ಸಮರ್ಪಕವಾಗಿಲ್ಲ. ಶೌಚಗೃಹ, ಸ್ನಾನದ ಮನೆಯ ನೀರು ಒಂದೇ ಕಡೆ ಹರಿದು ಹೋಗುವುದರಿಂದ ಮ್ಯಾನ್ ಹೋಲ್ ತುಂಬಿ ಹರಿಯುತ್ತಿದೆ. ಬಡಾವಣೆ ಸುತ್ತಲು ಕಾಂಪೌಂಡ್ ಇಲ್ಲ. ಇದರಿಂದ ಬೀದಿ ನಾಯಿ, ಬಿಡಾಡಿ ದನಗಳ ಕಾಟ ಹೆಚ್ಚಾಗಿದೆ ಎಂದು ನಿವಾಸಿಗಳು ಸಮಸ್ಯೆ ಹೇಳಿಕೊಂಡರು.

ಆರ್‌ಟಿಒ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಲು ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆದು ಹಾಗೇ ಬಿಡಲಾಗಿದೆ. ಹಲವು ತಿಂಗಳು ಕಳೆದರೂ ಯಾವುದೇ ಕಾಮಗಾರಿ ನಡೆದಿಲ್ಲ. ಈ ರಸ್ತೆ ಜಲ್ಲಿಕಲ್ಲಿನಿಂದ ಕೂಡಿದ್ದು, ಡಾಂಬರ್ ಭಾಗ್ಯ ಕಲ್ಪಿಸಬೇಕು. ನಿತ್ಯ ನೂರಾರು ವಾಹನಗಳು ರಸ್ತೆಯಲ್ಲಿ ಸಂಚರಿಸುವುದರಿಂದ ಧೂಳು ಹೆಚ್ಚಾಗಿದೆ ಎಂದರು.

ಬಡಾವಣೆಯಲ್ಲಿ 106 ಮನೆಗಳಿದ್ದು, ಒಂದು ಕೊಳವೆ ಬಾವಿ ಮಾತ್ರ ಇದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಮತ್ತೊಂದು ಕೊಳವೆ ಬಾವಿ ಕೊರೆಸಬೇಕು. ಜತೆಗೆ ಬಡಾವಣೆ ಆವರಣದಲ್ಲಿ ಒಂದು ದೇವಾಲಯ ನಿರ್ಮಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಬಡಾವಣೆಯಲ್ಲಿನ ಸಮಸ್ಯೆ ಅರಿಯಲು ಇಲ್ಲಿಗೆ ಭೇಟಿ ನೀಡಿದ್ದು, ಹಂತ ಹಂತವಾಗಿ ಎಲ್ಲ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಡಾವಣೆ ನಿವಾಸಿಗಳಾದ ಭವಾನಿ, ಶ್ವೇತಾ, ಕಲಾ, ಶೋಭಾ, ರಾಜಲಕ್ಷ್ಮಿ, ಪುಷ್ಪ, ಕಮಲಾ, ಶಕುಂತಲಾ, ಮಣಿ ಇದ್ದರು.