ಸರ್ಕಾರ ವಜಾಗೊಳಿಸಲು ಆಗ್ರಹ

ಚಿಕ್ಕಮಗಳೂರು: ಹಾಸನ ಶಾಸಕ ಪ್ರೀತಂ ಗೌಡ ಅವರ ಮನೆ, ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿದ ಕೃತ್ಯ ಖಂಡಿಸಿದ ಬಿಜೆಪಿ ಕಾರ್ಯಕರ್ತರು ಗುರುವಾರ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಘೊಷಣೆ ಕೂಗುತ್ತ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾಯಿಸಿದರು. ಜೆಡಿಎಸ್ ಕಾರ್ಯಕರ್ತರು ಪ್ರೀತಂ ಗೌಡ ಅವರ ಕುಟುಂಬದವರನ್ನು ಅವಾಚ್ಯವಾಗಿ ನಿಂದಿಸಿ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಾಜಪ್ಪ ಮಾತನಾಡಿ, ಹಲ್ಲೆ ನಡೆಸಿದ ಜೆಡಿಎಸ್ ಕಾರ್ಯಕರ್ತರನ್ನು ತಕ್ಷಣ ಬಂಧಿಸಬೇಕು. ಗೂಂಡಾಗಿರಿ ನಡೆಸಲು ಕುಮ್ಮಕ್ಕು ನೀಡುವ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಎಚ್.ಡಿ.ತಮ್ಮಯ್ಯ ಮಾತನಾಡಿ, ಶಾಸಕ ಪ್ರೀತಂಗೌಡ ಇಲ್ಲದ ಸಂದರ್ಭ ಅವರ ಮನೆಗೆ ನುಗ್ಗಿ ಕಲ್ಲು ತೂರಿದ್ದು ಖಂಡನೀಯ. ಕಾಂಗ್ರೆಸ್ ನೀಡಿದ ಬೆಂಬಲದಿಂದ ಜೆಡಿಎಸ್ ಅಧಿಕಾರ ಹಿಡಿದಿದೆ. ಕುಮಾರಸ್ವಾಮಿ ಆಕಸ್ಮಿಕವಾಗಿ ಸಿಎಂ ಆಗಿದ್ದಾರೆ ಎಂದರು.

ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್ ಮಾತನಾಡಿ, ಜನಪ್ರತಿನಿಧಿಯೊಬ್ಬರ ಮನೆಯಲ್ಲಿ ದಾಂಧಲೆ ನಡೆಸಿ ಈ ರೀತಿಯ ಗೂಂಡಾಗಿರಿ ಪ್ರದರ್ಶಿಸಿದ್ದು, ಇದು ಮುಂದುವರಿದಲ್ಲಿ ಬಿಜೆಪಿ ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಪಂ ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿ, ಅಲ್ಪಮತದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಸರ್ಕಾರವೇ ಗೂಂಡಾಗಿರಿಗೆ ಕುಮ್ಮಕ್ಕು ನೀಡಿದೆ. ಕೂಡಲೇ ಈ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್, ಜಿಲ್ಲಾ ಉಪಾಧ್ಯಕ್ಷ ಸಿ.ಆರ್.ಪ್ರೇಂಕುಮಾರ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ತಾಪಂ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ, ನಗರಸಭೆ ಸದಸ್ಯರಾದ ದೇವರಾಜ್ ಶೆಟ್ಟಿ, ಅಪ್ಸರ್ ಅಹಮ್ಮದ್, ಮುತ್ತಯ್ಯ, ಭುಜೇಂದ್ರರಾಜೇ ಅರಸ್, ರವಿಕುಮಾರ್, ಕೆ.ಎಸ್.ಪುಷ್ಪರಾಜ್ ಇತರರಿದ್ದರು.

ಜೆಡಿಎಸ್​ಗೆ ಇದು ಜನ ಕೊಟ್ಟಿರುವ ಅಧಿಕಾರ ಅಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರೆ ತಪ್ಪಲ್ಲ. ಆದರೆ ಹಲ್ಲೆ, ದಾಂಧಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು.

| ಎಚ್.ಡಿ.ತಮ್ಮಯ್ಯ, ಪ್ರಧಾನ ಕಾರ್ಯದರ್ಶಿ