ನಟ ಪ್ರಕಾಶ್ ರೈ ಗೆಲ್ಲುವ ಪರಿಸ್ಥಿತಿಯಲ್ಲಿ ಇಲ್ಲ

ಮಡಿಕೇರಿ: ಬಿಜೆಪಿ ವಿರುದ್ಧ ನಿರಂತರ ಮಾತನಾಡುತ್ತ ಬಂದಿರುವ ನಟ ಪ್ರಕಾಶ್ ರೈ, ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಸ್ಪರ್ಧಿಸಬಾರದಿತ್ತು ಎಂದು ಬೆಂಗಳೂರಿನ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರೀಸ್ ಹೇಳಿದರು.

ಅವರ ಸಿದ್ಧಾಂತಕ್ಕೆ ವಿರುದ್ಧ ನಿಂತಿದ್ದಾರೆ. ಅವರಿಗೆ ಮತ ಹಾಕುವುದರಿಂದ ಪ್ರಯೋಜನವಾಗುವುದಿಲ್ಲ. ಅವರು ಗೆಲ್ಲುವ ಪರಿಸ್ಥಿತಿಯಲ್ಲಿ ಇಲ್ಲ. ಬಿಜೆಪಿ- ಕಾಂಗ್ರೆಸ್(ಮೈತ್ರಿ) ಅಭ್ಯರ್ಥಿ ನಡುವೆ ನೇರ ಸ್ಪರ್ಧೆ ಇದ್ದು, ಪ್ರಕಾಶ್ ರೈಗೆ ಹೆಚ್ಚಿನ ಮತ ಸಿಗುವುದಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಾತ್ಯತೀತ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದರಿಂದ ಮೈತ್ರಿಕೂಟಕ್ಕೆ ಪ್ರಯೋಜನವಾಗಲಿದೆ. ತ್ರಿಕೋನ ಸ್ಪರ್ಧೆ ಇದ್ದಾಗ ಬಿಜೆಪಿಗೆ ಲಾಭವಾಗುತ್ತಿತ್ತು. ಕೋಮುವಾದಿ ಬಿಜೆಪಿ ವಿರೋಧಿಸುವವರು ನೇರವಾಗಿ ಮೈತ್ರಿ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ. ಇದರಿಂದ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಬಹುದು ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀಡಿರುವ ಭದ್ರತೆ ಕಡಿಮೆ ಮಾಡಿರುವ ಸಾಧ್ಯತೆ ಇದೆ. ಮೋದಿ ಏನೂ ಬೇಕಾದರೂ ಮಾಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು. 56 ಇಂಚು ಎದೆಗೆ (ಮೋದಿ) ಉತ್ತರ ನೀಡಲು ಮತದಾರರು ಸಿದ್ಧರಾಗಿದ್ದಾರೆ ಎಂದು ಹ್ಯಾರೀಸ್ ಹೇಳಿದರು.

ಮೋದಿ ಜಪ ಮಾಡುವುದನ್ನು ಬಿಟ್ಟು ಬಿಡಿ : ಯುವಜನರು ಮೋದಿ ಜಪ ಮಾಡುವುದನ್ನು ಬಿಟ್ಟು ತಮಗೆ ಆಗಿರುವ ಮೋಸ ಅರಿತುಕೊಂಡು ಮತ ಚಲಾಯಿಸಬೇಕೆಂದು ಶಾಂತಿನಗರ ಶಾಸಕ ಎನ್.ಎ. ಹ್ಯಾರೀಸ್ ಸಲಹೆ ನೀಡಿದರು.

ಐದು ವರ್ಷದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿಂದಿನ 40 ವರ್ಷದಲ್ಲಿ ಇಂಥ ಪರಿಸ್ಥಿತಿ ಇರಲಿಲ್ಲ. ಮೋದಿ ಯುವಜನರಿಗೆ ಮೋಸ ಮಾಡಿದ್ದಾರೆ. ಅವರ ಭವಿಷ್ಯ ಹಾಳು ಮಾಡಿದ್ದಾರೆ.

ಹೀಗಿರುವಾಗ ಯುವಜನರು ಏಕೆ ಮೋದಿ ಜಪ ಮಾಡಬೇಕೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕೇಂದ್ರದಲ್ಲಿರುವ ಸುಳ್ಳಿನ ಸರ್ಕಾರ ಸಾಕು. ಜನಪರ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರ ಬರಬೇಕು. ಸಂಸದ ಪ್ರತಾಪ್ ಸಿಂಹ ಬಗ್ಗೆ ಜನರಿಗೆ ಗೊತ್ತಿದ್ದು, ಮೈಸೂರು- ಕೊಡಗಿನ ಜನರಿಗೆ ಏನೂ ಪ್ರಯೋಜನ ಆಗಿಲ್ಲ. ಮೈಸೂರಿನಲ್ಲಿ ಪಾಸ್‌ಪೋರ್ಟ್ ಕಚೇರಿ ಪ್ರಾರಂಭಿಸಿರುವುದನ್ನೇ ದೊಡ್ಡ ಸಾಧನೆ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಐದು ವರ್ಷ ಸುಳ್ಳು ಹೇಳುತ್ತ ಮೋದಿ ಆಡಳಿತ ನಡೆಸಿದ್ದಾರೆ. ದರ ಏರಿಕೆ ಮುಂದಿಟ್ಟುಕೊಂಡು ಮೋದಿ ಅಧಿಕಾರಕ್ಕೆ ಬಂದರು. 350 ರೂ. ಇದ್ದ ಅಡುಗೆ ಅನಿಲ ಬೆಲೆ ಈಗ 950 ರೂ.ಗೆ ಏರಿಕೆಯಾಗಿದೆ. ಡೀಸೆಲ್- ಪೆಟ್ರೋಲ್ ದರ ಏರಿಕೆ ಆಗಿದೆ. ಜನರಿಗೆ ನೀಡಿದ ಮಾತು ಉಳಿಸಿಕೊಳ್ಳಲಿಲ್ಲ ಎಂದು ಟೀಕಿಸಿದರು.

ವಿದೇಶದಿಂದ ಕಾಳುಮೆಣಸು ಆಮದು ಮಾಡಿಕೊಳ್ಳುವುದರ ಮೂಲಕ ಕೇಂದ್ರ ಸರ್ಕಾರ ಬೆಳೆಗಾರರಿಗೆ ಮೋಸ ಮಾಡಿದೆ. ಕಾಫಿ ದರವೂ ಕುಸಿತ ಕಂಡಿದೆ. ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ನನ್ನ ಮುಖ ನೋಡಿಕೊಂಡು ಮತ ಹಾಕಬೇಡಿ. ಮೋದಿ ಮುಖ ನೋಡಿ ಮತ ಹಾಕಿ ಎಂದು ಪ್ರತಾಪ್ ಸಿಂಹ ಪ್ರಚಾರ ಮಾಡುತ್ತಿದ್ದಾರೆ. ಇವರ ಮುಖ ನೋಡದ ಮೇಲೆ ಇವರಿಗೆ ಏಕೆ ಮತ ಹಾಕಬೇಕೆಂದು ಮತದಾರರು ಕೇಳುತ್ತಿದ್ದಾರೆ ಎಂದರು.

ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಎದುರಾದ ಸಂಕಷ್ಟ ಪರಿಹಾರಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಕೇರಳ ರಾಜ್ಯಕ್ಕೆ ನೀಡಿದ ಪರಿಹಾರವನ್ನು ಕೊಡಗಿಗೆ ನೀಡಿಲ್ಲ. ಪ್ರಧಾನಿ ಕನಿಷ್ಠ ವೈಮಾನಿಕ ಸಮೀಕ್ಷೆಯೂ ನಡೆಸಲಿಲ್ಲ. ಕೇಂದ್ರ ಸರ್ಕಾರ ಯಾವ ಪರಿಹಾರ ಕ್ರಮ ಕೈಗೆತ್ತಿಕೊಳ್ಳಲಿಲ್ಲ ಎಂದು ದೂಷಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್‌ಕುಮಾರ್, ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಕೆ.ಎ.ಯಾಕೂಬ್, ಯುವ ಘಟಕ ಜಿಲ್ಲಾಧ್ಯಕ್ಷ ಎಸ್.ಪಿ. ಹನೀಫ್, ಮಡಿಕೇರಿ ನಗರಾಧ್ಯಕ್ಷ ಕೆ.ಎ. ಯಾಕೂಬ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಸಂಚಾಲಕ ಎಂ.ಎ. ಉಸ್ಮಾನ್ ಇದ್ದರು.