ಮನೆ ಸಮೀಪ ನಿಗೂಢ ಸ್ಫೋಟ, ಸಾವು: ಊಹಾಪೋಹಗಳಿಗೆ ಎಡೆಮಾಡಿಕೊಡಬೇಡಿ ಎಂದ ಶಾಸಕ ಮುನಿರತ್ನ

ಬೆಂಗಳೂರು: ಯಾವುದೇ ಘಟನೆ ನಡೆದರೂ ಅದಕ್ಕೊಂದು ಆಯಾಮಗಳಿರುತ್ತದೆ. ತನಿಖೆ ನಡೆಯ ಬೇಕಾಗಿದೆ. ಊಹಾ ಪೋಹಗಳಿಗೆ ಎಡೆ ಮಾಡಿ ಕೊಡಬಾರದು ಎಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಹೇಳಿದ್ದಾರೆ.

ಬೆಳಗ್ಗೆಯಷ್ಟೇ ಮುನಿರತ್ನ ನಿವಾಸದ ಕಾರ್‌ ಪಾರ್ಕಿಂಗ್‌ ಬಳಿಯಲ್ಲಿ ಸ್ಫೋಟ ಸಂಭವಿಸಿ ಓರ್ವ ಮೃತಪಟ್ಟಿದ್ದಾನೆ ಎಂದು ವರದಿಯಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅವರು, ವೆಂಕಟೇಶ್ ಇಲ್ಲೇ ಹುಟ್ಟಿ ಇಲ್ಲೇ ಬೆಳೆದವ. ವೆಂಕಟೇಶ್ ಮೃತಪಟ್ಟಿದ್ದು ಮನಸ್ಸಿಗೆ ಸಾಕಷ್ಟು ನೋವಾಗಿದೆ. ವೆಂಕಟೇಶ್ ನನ್ನ ಕುಟುಂಬದಲ್ಲಿ ಒಬ್ಬನಾಗಿದ್ದ. ಮನಸ್ಸಿಗೆ ಘಾಸಿ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಯಾವುದೇ‌ ವಿಚಾರದ ಬಗ್ಗೆ ಮಾಹಿತಿ ಪಡೆಯಬೇಕು. ಪೊಲೀಸ್‌ ತನಿಖೆಯ ಮಾಹಿತಿ ಮಾತ್ರ ಅಧಿಕೃತವಾಗಿರುತ್ತದೆ. ಪ್ರಾಮಾಣಿಕವಾಗಿ‌ ಪೊಲೀಸ್ ಆಯುಕ್ತರು ತನಿಖೆ ಮಾಡಬೇಕು. ಆಮೇಲೆ ಸತ್ಯಾಸತ್ಯತೆ ತಿಳಿಯುತ್ತದೆ. ತಪ್ಪು ಸಂದೇಶ ಕೊಡುವುದು ಬೇಡ. ಊಹಾ ಪೋಹಗಳಿಗೆ ಅವಕಾಶ ಮಾಡಿಕೊಡಬೇಡಿ. ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಫೋಟಗೊಂಡ ಅರ್ಧಗಂಟೆ ಬಳಿಕ ನನಗೆ ಮಾಹಿತಿ ದೊರಕಿತು. ಸ್ಫೋಟದ ರಭಸದ ಹಿನ್ನೆಲೆ ವೈಯಾಲಿಕಾವಲ್ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದೇವೆ. ನಾವಿಬ್ಬರು ಅಕ್ಕಪಕ್ಕದ ಮನೆಯಲ್ಲಿ ಬೆಳೆದವರು. ವೆಂಕಟೇಶ್​ ನನ್ನ ತಂದೆಯ ಬಾಲ್ಯದ ಸ್ನೇಹಿತ. ಮೃತ ವೆಂಕಟೇಶ್ ತುಂಬ ಮುಗ್ಧ ವ್ಯಕ್ತಿಯಾಗಿದ್ದ. ಅವರಿಗೆ ಮೂರು ಜನ ಅಣ್ಣ ತಮ್ಮಂದಿರು, ತಂಗಿ ಇದ್ದಾರೆ. ಮೂರು ಜನ ಹೆಣ್ಣುಮಕ್ಕಳಿದ್ದಾರೆ. ದೋಬಿ ಕೆಲಸ ಮಾಡುತ್ತಿದ್ದ ವೆಂಕಟೇಶ್‌ಗೆ 68 ವರ್ಷ ವಯಸ್ಸಾಗಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *