ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವೆ

ಪಿರಿಯಾಪಟ್ಟಣ: ಮೈತ್ರಿ ಧರ್ಮಕ್ಕೆ ಚ್ಯುತಿ ಬಾರದಂತೆ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಶಾಸಕ ಕೆ.ಮಹದೇವ್ ತಿಳಿಸಿದರು.
ಸಂಸದ ಪ್ರತಾಪಸಿಂಹ ಅವರು ಶಾಸಕ ಕೆ.ಮಹದೇವ್ ಮನೆಗೆ ರಹಸ್ಯವಾಗಿ ಭೇಟಿ ನೀಡಿ ಲೋಕಸಭಾ ಚುನಾವಣೆಗೆ ಬೆಂಬಲ ಕೋರಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಗುಸುಗುಸು ಚರ್ಚೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ವಿಜಯವಾಣಿ ಜತೆ ಮಾತನಾಡಿದ ಅವರು, ಕೆಲವು ಹಿತಶತ್ರುಗಳು ಈ ರೀತಿಯ ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಧರ್ಮದ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದು , ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಎಚ್ ವಿಜಯಶಂಕರ್ ಕಣದಲ್ಲಿರುವುದರಿಂದ ನಮ್ಮ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಅವರ ಪರ ಮತಯಾಚಿಸಲಾಗುವುದು ಎಂದರು.
ಈವರೆಗೂ ಅಭ್ಯರ್ಥಿಯಾಗಲಿ ಅಥವಾ ಕಾಂಗ್ರೆಸ್ ಪಕ್ಷದ ಮುಖಂಡರಾಗಲೀ ಪ್ರಚಾರಕ್ಕೆ ಬರುವಂತೆ ನಮ್ಮನ್ನು ಕರೆದಿಲ್ಲ ಎಂದ ಅವರು, ಚುನಾವಣಾ ಪ್ರಚಾರಕ್ಕೆ ಆಗಮಿಸುವಂತೆ ಕರೆದಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಕೆಲವು ಮುಖಂಡರು ಸಂಸದ ಪ್ರತಾಪಸಿಂಹರೊಂದಿಗೆ ನಾನು ಒಳ ಒಪ್ಪಂದ ಮಾಡಿಕೊಂಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಮತದಾರರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಾಲೂಕಿನ ಒಂದು ವರ್ಗಕ್ಕೆ ತಪ್ಪು ಸಂದೇಶ ನೀಡುವ ನಿಟ್ಟಿನಲ್ಲಿ ಕೆಲವರು ಈ ರೀತಿಯ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಜನಪರ ಆಡಳಿತ ನೀಡುತ್ತಿದ್ದು ಇದನ್ನು ಸಹಿಸಿಕೊಳ್ಳಲು ತಾಲೂಕಿನ ಕೆಲವು ಮುಖಂಡರಿಗೆ ಆಗುತ್ತಿಲ್ಲ ಎಂದು ಟೀಕಿಸಿದರು. ಸಂಸದರೊಂದಿಗೆ ನಾನು ರಹಸ್ಯ ಮಾತುಕತೆ ನಡೆಸಿರುವುದಕ್ಕೆ ಆಧಾರ ನೀಡಲಿ ಎಂದರು ಸವಾಲು ಹಾಕಿದರು.