ವಿದ್ಯೆ ಇಲ್ಲದಿದ್ದರೇನು? ಒಳಿತು ಮಾಡುವ ಮನಸ್ಸಿದೆ


ಪಿರಿಯಾಪಟ್ಟಣ: ಪಟ್ಟಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವಾಗುತ್ತಿರುವುದು ನಮ್ಮ ಸೌಭಾಗ್ಯ ಎಂದು ಕ್ಷೇತ್ರದ ಶಾಸಕ ಕೆ.ಮಹದೇವ್ ಸಂತಸ ವ್ಯಕ್ತಪಡಿಸಿದರು.


ಮರುಘಾಮಠದ ಮೋಕ್ಷಪತಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಶಾಸಕರು, ಭಾರತ ಎಲ್ಲ ಭಾಷೆ, ಸಂಸ್ಕೃತಿಗಳನ್ನು ಒಳಗೊಂಡ ದೇಶವಾಗಿದೆ. ಪ್ರತಿ ರಾಜ್ಯದಲ್ಲಿ ಭಾಷೆಯ ಉಳಿವಿಗಾಗಿ ಹೋರಾಟಗಳು ನಡೆಯುತ್ತಲೆ ಇವೆ. ಅಂತೆಯೇ ನಾವು ಕೂಡ ಕನ್ನಡ ಭಾಷೆ ಉಳಿವಿಗೆ ಕಂಟಕ ಎದುರಾದಾಗ ಹೋರಾಟ ಮಾಡಬೇಕು ಹಾಗೂ ಮಾತೃ ಭಾಷೆಗೆ ಸದಾ ಒತ್ತು ನೀಡಬೇಕು ಎಂದರು.


ಮಹದೇವ್ ವಿದ್ಯಾವಂತ ಅಲ್ಲ. ಆತನಿಗೆ ಶಾಸಕ ಸ್ಥಾನ ನೀಡಿದರೆ ಏನು ನಿಭಾಯಿಸುತ್ತಾನೆ ಎಂಬ ಮಾತುಗಳನ್ನು ಕೆಲವರು ಹೇಳುತ್ತಾರೆ. ಆ ರೀತಿ ಹೇಳುವವರಿಗಿಂತ ನಾನು ಯಾವುದರಲ್ಲೂ ಕಡಿಮೆ ಇಲ್ಲ. ಅಂದು ಬಡತನವಿತ್ತು. ಆದ್ದರಿಂದ ಪಿಯುಸಿವರೆಗಷ್ಟೆ ಓದಲು ಸಾಧ್ಯವಾಯಿತು. ಆದರೂ ಜ್ಞಾನವಿದೆ. ಸಮಾಜದ ಒಳಿತಿಗಾಗಿ, ತಾಲೂಕಿನ ಅಭಿವೃದ್ಧಿ ಮಾಡುವ ಮನಸ್ಸಿದೆ. ಪಿರಿಯಾಪಟ್ಟಣ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡುವ ಕನಸು ಹೊತ್ತಿದ್ದೇನೆ ಎಂದರು.


ಭಾಷೆಯ ಬಗ್ಗೆ ಆಸಕ್ತಿ ಇರಬೇಕು. ಸಮಾಜ ಸೇವೆ ಮಾಡುವ ಮನೋಭಾವವಿರಬೇಕು. ಆಗ ಮಾತ್ರ ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತಾ ಬೆಳೆಯಲು ಸಾಧ್ಯ. ಜಾತಿ ಮೇಲೆ ಅಳತೆಗೋಲನ್ನು ಇಟ್ಟು ಮನುಷ್ಯನ ವ್ಯಕ್ತಿತ್ವಕ್ಕೆ ಮಸಿಬಳಿಯುವ ಕೆಲಸಕ್ಕೆ ಯಾರು ಮುಂದಾಗಬಾರದು ಎಂದು ಮನವಿ ಮಾಡಿದರು.


ನಿಕಟ ಪೂರ್ವ ಅಧ್ಯಕ್ಷ ಡಾ.ಕೆ.ಅನಂತರಾಮು ಮಾತನಾಡಿ, ಇಂದಿನ ಜಿಲ್ಲಾ ಸಮ್ಮೇಳನ, ಅಖಿಲ ಭಾರತ ಸಮ್ಮೇಳನದ ರೀತಿಯಲ್ಲಿ ಕಂಡುಬರುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಇಂಗ್ಲಿಷ್ ಭಾಷೆಯನ್ನು ಓದಿದರೆ ಉದ್ಯೋಗ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ ಎಲ್ಲರೂ ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಓದಿದರೂ ಕೂಡ ಉದ್ಯೋಗ ಸಿಗುತ್ತದೆ ಎಂಬ ವಾತಾವರಣವನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಬೇಕು. ಅಲ್ಲದೆ ಇಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣ ಕಡಿಮೆಯಾಗಿದೆ. ವಿದ್ಯಾರ್ಥಿಗಳಲ್ಲಿ ಅಂಕ ಗಳಿಸುವುದೊಂದೆ ಗುರಿಯಾಗಿದೆ. ಆದ್ದರಿಂದ ನೈತಿಕ ಶಿಕ್ಷಣದ ಕಡೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.


ಕನ್ನಡ ಭಾಷೆಯಲ್ಲಿ ಅನ್ನ ಹುಟ್ಟಲ್ಲ ಎಂಬ ಭಾವನೆ ಕೆಲವರಲ್ಲಿದೆ. ಆದ್ದರಿಂದ ಹೊಟ್ಟೆಪಾಡಿಗೆ ಇಂಗ್ಲಿಷ್ ಕಲಿತು ಹೃದಯದಲ್ಲಿ ಕನ್ನಡವನ್ನು ತುಂಬಿಕೊಳ್ಳಬೇಕಾಗಿದೆ. ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕನ್ನಡ ಭಾಷೆ ಅಳಿದು ಹೋದರೆ ಕನ್ನಡ ಸಂಸ್ಕೃತಿ ಅಳಿಸಿಹೋಗುತ್ತದೆ. ಆದ್ದರಿಂದ ಕನ್ನಡ ಭಾಷೆಯನ್ನು ರಕ್ಷಣೆ ಮಾಡಬೇಕಾಗಿದೆ. ಶಾಲೆಗಳಲ್ಲಿ ನಮ್ಮ ನಾಡಿನ ಆಚಾರ-ವಿಚಾರ, ಸಂಸ್ಕೃತಿಗಳನ್ನು ತಿಳಿ ಹೇಳುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.


ನಿಕಟ ಪೂರ್ವ ಅಧ್ಯಕ್ಷ ಡಾ.ಕೆ.ಅನಂತರಾಮು ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ನೆನಪಿನಕಾಣಿಕೆ ನೀಡಿ ಗೌರವಿಸಲಾಯಿತು. ಸಮ್ಮೇಳನದ ಅಧ್ಯಕ್ಷ ಇಂದೂಧರ ಹೊನ್ನಾಪುರ ಬರೆದ ಉಳಿದದ್ದು ಸಂವಿಧಾನ ಹಾಗೂ ಬಿದಿರುಕೋಲು ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಜಿಲ್ಲಾ ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಗೋರಳ್ಳಿ ಜಗದೀಶ್ ಸೇರಿದಂತೆ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.


ಕಾರ್ಯಕ್ರಮದಲ್ಲಿ ಸಾವಿರರು ಸಂಖ್ಯೆಯಲ್ಲಿ ತಾಲೂಕಿನ ಕನ್ನಡಾಭಿಮಾನಿಗಳು, ಸಾರ್ವಜನಿಕರು, ಸಾಹಿತ್ಯಾಸಕ್ತರು, ವಿವಿಧ ಸಂಘಸಂಸ್ಥೆಯ ಮಹಿಳೆಯರು ಪಾಲ್ಗೊಂಡಿದ್ದರು.