ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಗಣೇಶ್​ಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್​

ಬೆಂಗಳೂರು: ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಕಂಪ್ಲಿ ಶಾಸಕ ಗಣೇಶ್​ಗೆ ಹೈಕೋರ್ಟ್​ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ.

ರೆಸಾರ್ಟ್​ನಲ್ಲಿ ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಅವರನ್ನು ಫೆ.20ರಂದು ಅಹಮದಾಬಾದ್​ನಲ್ಲಿ ಬಂಧಿಸಲಾಗಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಗಣೇಶ್​ ಅವರ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಮೊರೆ ಹೋಗಿದ್ದರು.

ಹೈಕೋರ್ಟ್​ನಲ್ಲಿ ಗಣೇಶ್​ ಪರ ವಾದ ಮಂಡಿಸಿದ ವಕೀಲರು, ಆರೋಪಿ ಗಣೇಶ್​ ಅವರು ಹಲ್ಲೆ ನಡೆದಿರುವುದನ್ನು ನಿರಾಕರಿಸುತ್ತಿಲ್ಲ. ಆದರೆ ಆ ಗಲಾಟೆಯಾಗಿದ್ದು ಆತ್ಮರಕ್ಷಣೆಗಾಗಿ. ಇದು ಪೂರ್ವ ಯೋಜಿತ ಆಗಿರಲಿಲ್ಲ. ಮೊದಲು ಆನಂದ್​ ಸಿಂಗ್​ ಅವರೇ ಹಲ್ಲೆ ನಡೆಸಿದ್ದರು. ರಕ್ಷಿಸಿಕೊಳ್ಳಲು ಗಣೇಶ್​ ಪ್ರತಿದಾಳಿ ನಡೆಸಿದ್ದರು. ಘಟನೆ ಬಳಿಕ ಅಲ್ಲಿದ್ದ ಇತರ ಶಾಸಕರು ಯಾರೂ ದೂರು ನೀಡಿಲ್ಲ. ಆಸ್ಪತ್ರೆ ಸಿಬ್ಬಂದಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಯೇ ಇದ್ದ ಹೂವಿನಕುಂಡ, ದೊಣ್ಣೆಯಿಂದ ಹಲ್ಲೆ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖವಿದೆ. ಹೀಗಾಗಿ ಇದು ಪೂರ್ವ ಸಿದ್ಧತೆಯಿಂದ ಮಾಡಿದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ವಾದಿಸಿದ್ದರು.

ಆದರೆ ಈ ವಾದವನ್ನು ಸರ್ಕಾರ ಪರ ವಕೀಲರು ಅಲ್ಲಗಳೆದಿದ್ದರು. ಅದೊಂದು ಉದ್ದೇಶಪೂರ್ವಕ ಹಲ್ಲೆ ಎನ್ನುವುದಕ್ಕೆ ಸಾಕ್ಷಿ ಇದೆ. ಈಗಾಗಲೇ ಸಂಬಂಧಪಟ್ಟ ದಾಖಲೆಗಳನ್ನು ಕೋರ್ಟ್​ಗೆ ಸಲ್ಲಿಸಲಾಗಿದೆ. ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಗನ್​ ಕೊಡಿ ಮುಗಿಸುತ್ತೇನೆ ಎಂದು ಹೇಳಿರುವುದಕ್ಕೆ ಸಾಕ್ಷಿ ಇದೆ ಎಂದು ಹೇಳಿದ್ದರು.

ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್​ ಎರಡು ಲಕ್ಷ ರೂ. ಬಾಂಡ್​, ಇಬ್ಬರ ಶ್ಯೂರಿಟಿ, ಸಾಕ್ಷಿ ನಾಶಪಡಿಸಬಾರದು ಎಂಬ ಷರತ್ತಿನೊಂದಿಗೆ ಜಾಮೀನು ನೀಡಿದೆ.

Leave a Reply

Your email address will not be published. Required fields are marked *