ಪಾಕ್​ನಲ್ಲಿ ಹಿಂದು ದೇಗುಲ ನಿರ್ವಣಕ್ಕೆ ಅವಕಾಶವಷ್ಟೇ

ಬಾಳೆಹೊನ್ನೂರು: ನಮ್ಮ ದೇಶಕ್ಕೆ ಈಗಲೂ ಮನಮೋಹನ್ ಸಿಂಗ್ ಅವರೇ ಪ್ರಧಾನಿ ಎಂದು ಶಾಸಕ ಟಿ.ಡಿ.ರಾಜೇಗೌಡ ಭಾವಿಸಿದಂತಿದೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ವ್ಯಂಗ್ಯವಾಡಿದರು.

ಪಟ್ಟಣದ ಜೇಸಿ ವೃತ್ತದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಟಿ.ಡಿ.ರಾಜೇಗೌಡ ಅವರು ಮಾಹಿತಿ ಕೊರತೆಯಿಂದ ಹೇಳಿಕೆ ನೀಡುತ್ತಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊಗಳುತ್ತಾರೆ ಎಂದರೆ ಅವರ ಮನಸ್ಥಿತಿ ಎಂಥದ್ದು ಎಂಬುದು ತಿಳಿಯುತ್ತದೆ ಎಂದು ಟೀಕಿಸಿದರು.

ಪಾಕ್​ನಲ್ಲಿ 400 ಹಿಂದು ದೇವಾಲಯಗಳ ನಿರ್ವಣಕ್ಕೆ ಅವಕಾಶ ನೀಡಲಾಗಿದೆ. ಆ ಕಾರಣಕ್ಕೆ ನಾನು ಅವರನ್ನು ಹೊಗಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ರಾಜೇಗೌಡರೇ ನೀವು ಪಾಕಿಸ್ತಾನಕ್ಕೆ ಹೋಗಿ ದೇವಾಲಯ ಕಟ್ಟಲು ಅನುಮತಿ ನೀಡಿದ್ದನ್ನು ನೋಡಿಕೊಂಡು ಬಂದಿದ್ದೀರೋ? 400 ವರ್ಷಗಳ ಹಳೆಯದಾದ ದೇವಸ್ಥಾನ ಜೀಣೋದ್ಧಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಅಂಶ ತಿಳಿದುಕೊಳ್ಳಿ ಎಂದು ಹೇಳಿದರು.

ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದಾಗ ಎನ್.ಆರ್.ಪುರದಲ್ಲಿ ಮೀನು ಮಾರುಕಟ್ಟೆಗೆ ಶಂಕುಸ್ಥಾಪನೆ ನೆರವೇರಿಸಿ ಆರು ತಿಂಗಳಲ್ಲಿ ಕಾಮಗಾರಿ ಮಾಡಿ ಮುಗಿಸುವ ಭರವಸೆ ನೀಡಿದ್ದರು. ಎರಡು ವರ್ಷ ಕಳೆದರೂ ಆರಂಭಗೊಂಡಿಲ್ಲ. ಇದು ಮಧ್ವರಾಜ್ ಅಭಿವೃದ್ಧಿಯ ಕಾರ್ಯ ಎಂದು ಲೇವಡಿ ಮಾಡಿದರು.

ಅನುದಾನ ತಂದಿದ್ದು ನಾನು: ಕ್ಷೇತ್ರಕ್ಕೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ತಂದ ಅನುದಾನಕ್ಕೆ ಶಾಸಕ ಟಿ.ಡಿ.ರಾಜೇಗೌಡ ಅಡಿಗಲ್ಲು ಹಾಕುತ್ತಿದ್ದಾರೆ ಅಷ್ಟೇ. ಅದರ ಕಾಮಗಾರಿ ಮಾಡಿಸುವ ಮುತುವರ್ಜಿ ವಹಿಸುತ್ತಿಲ್ಲ ಎಂದು ಜೀವರಾಜ್ ದೂರಿದರು. ಇದನ್ನು ನಾನು ಪ್ರಶ್ನಿಸಿದರೆ ಜೀವರಾಜ್ ಅದನ್ನು ಕೇಳಲು ಯಾರು ಎಂದು ಶಾಸಕರು ಹೇಳುತ್ತಾರೆ. ಕ್ಷೇತ್ರದ ಸಾಮಾನ್ಯ ಪ್ರಜೆಯಾಗಿ ಕೇಳುತ್ತಿದ್ದೇನೆ. ಶಾಸಕರನ್ನು ಕೇಳುವ ಅಧಿಕಾರ ನನಗೆ ಇದೆ ಎಂದು ಟಾಂಗ್ ನೀಡಿದರು.