ಶಾಸಕ ದಿನಕರ ಶೆಟ್ಟಿ ಪ್ರತಿಭಟನೆ

ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣ ಎದುರಿನ ಹೆದ್ದಾರಿಯಲ್ಲಿನ ಬೃಹತ್ ಹೊಂಡಗಳನ್ನು ಮುಚ್ಚುವಂತೆ ಐಆರ್​ಬಿ ಅಧಿಕಾರಿಗಳಿಗೆ ಸೂಚಿಸಿದರೂ ಕ್ರಮ ಕೈಗೊಳ್ಳದ ಕಾರಣ ಸ್ವತಃ ಶಾಸಕ ದಿನಕರ ಶೆಟ್ಟಿ ಅವರೇ ಹೆದ್ದಾರಿ ತಡೆದು ಬುಧವಾರ ರಾತ್ರಿ ಪ್ರತಿಭಟಿಸಿದರು.

ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್ ಕಂದಕಗಳು ನಿರ್ವಣವಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಶಾಸಕರು ಇತ್ತೀಚೆಗೆ ಐಆರ್​ಬಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ದುರಸ್ತಿ ಮಾಡುವಂತೆ ಸೂಚಿಸಿ, 15 ದಿನಗಳ ಕಾಲಾವಕಾಶ ನೀಡಿದ್ದರು. ಆದರೆ, ಅಧಿಕಾರಿಗಳು ಹೊಂಡಗಳನ್ನು ಮುಚ್ಚುವ ಕಾಮಗಾರಿ ಕೈಗೊಳ್ಳದ ಕಾರಣ ಆಕ್ರೋಶಗೊಂಡ ಶಾಸಕರು ರಾತ್ರಿ ಏಕಾಏಕಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಇದರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಯಿತು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ತಹಸೀಲ್ದಾರ್ ಮೇಘರಾಜ್ ನಾಯ್ಕ ಅವರು ಎನ್​ಎಚ್​ನ ಅಧಿಕಾರಿಗಳನ್ನು ಪ್ರತಿಭಟನಾ ಸ್ಥಳಕ್ಕೆ ಕರೆಯಿಸಿ, ಶಾಸಕರನ್ನು ಸಮಾಧಾನ ಪಡಿಸಿದರು. ಪ್ರಾಧಿಕಾರದ ಅಧಿಕಾರಿಗಳು ಗುರುವಾರ ಬೆಳಗ್ಗೆ ಹೊಂಡ ಮುಚ್ಚುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಬಿಜೆಪಿ ಪ್ರಮುಖರಾದ ಜಗದೀಶ ಬಲ್ಲಾಳ, ಪ್ರಶಾಂತ ನಾಯ್ಕ, ಹೇಮಂತಕುಮಾರ ಗಾಂವ್ಕರ್, ವಿಶ್ವನಾಥ ನಾಯ್ಕ , ವಿನಾಯಕ ಭಟ್, ಅಶೋಕ ಆಚಾರ್ಯ, ಇತರರಿದ್ದರು.