ಕಲ್ಯಾಣನಗರ ಪಾರ್ಕ್​ಗೆ 70 ಲಕ್ಷ ರೂ.

ಚಿಕ್ಕಮಗಳೂರು: ಅಮೃತ್ ಯೋಜನೆಯಡಿ 3 ಕೋಟಿ ರೂ.ವೆಚ್ಚದಲ್ಲಿ ನಗರದ ವಿವಿಧ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಪೈಕಿ 70 ಲಕ್ಷ ರೂ.ನಷ್ಟು ಸಿಂಹಪಾಲನ್ನು ಕಲ್ಯಾಣನಗರ ಪಾರ್ಕ್​ಗೆ ಮೀಸಲಿಡಲಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಕೇಂದ್ರದ ಅಮೃತ್ ಯೋಜನೆಯಡಿ ನಗರದ ವಿವಿಧೆಡೆ ಪಾರ್ಕ್​ಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ 122 ಕೋಟಿ ರೂ.ನ ಅಮೃತ್ ಯೋಜನೆಯಲ್ಲಿ ನಗರದ ವಿವಿಧ ಪಾರ್ಕ್​ಗಳ ಅಭಿವೃದ್ಧಿ ಕಾರ್ಯವೂ ಸೇರಿದೆ. ಜತೆಗೆ ನಗರ ವ್ಯಾಪ್ತಿಯ ನಾಲೆಗಳು, ಕೆರೆ ಅಭಿವೃದ್ಧಿ ಕಾರ್ಯವನ್ನೂ ಅಮೃತ್ ಯೋಜನೆಯಡಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೇಂದ್ರದ ಸ್ಮಾರ್ಟ್ ಸಿಟಿ ಯೋಜನೆಯ ಮಾನದಂಡಗಳ ವ್ಯಾಪ್ತಿಯಲ್ಲಿ ಈ ನಗರ ಬಾರದಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಅಮೃತ್ ಯೋಜನೆ ಮಂಜೂರಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಅಭಿನಂದಿಸುವುದಾಗಿ ಹೇಳಿದರು.

ಸುಸಜ್ಜಿತ ಪಾರ್ಕ್ ನಿರ್ಮಾಣ ಮಾಡಿ ಚೈನ್​ಲಿಂಕ್ ಬೇಲಿ ಅಳವಡಿಸಲಾಗುವುದು. ವಾಕಿಂಗ್ ಪಾತ್ ಸೇರಿ ವ್ಯಾಯಾಮಕ್ಕೆ ಬೇಕಾಗುವ ಪರಿಕರಗಳನ್ನು ಅಳವಡಿಸಲಾಗುವುದು. ಬಡಾವಣೆ ನಿವಾಸಿಗಳಿಗೆ ಆರೋಗ್ಯ ಕಾಪಾಡಿಕೊಳ್ಳಲು ಇದರಿಂದ ಅನುಕೂಲವಾಗಲಿದೆ ಎಂದರು.