ವಿಶ್ವವೇ ಮೆಚ್ಚುವ ಆಡಳಿತ ನೀಡಿದೆ ಬಿಜೆಪಿ

ಚಿಕ್ಕಮಗಳೂರು: ಅಭಿವೃದ್ಧಿಗೆ ಆದ್ಯತೆ ನೀಡಿ ಭಾರತದ ಸಾಮರ್ಥ್ಯ ಹೆಚ್ಚಿಸಿ, ಸಾಮಾನ್ಯರು, ಕಡುಬಡವರಿಗೆ ಸಹಾಯವಾಗುವಂಥ ಯೋಜನೆ ರೂಪಿಸಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಗತ್ತೇ ಮೆಚ್ಚುವಂಥ ಕೆಲಸ ಮಾಡಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

1980ರ ಏ.6ರಂದು ಬಿಜೆಪಿ ವಿಧ್ಯುಕ್ತವಾಗಿ ಆರಂಭವಾಯಿತು. ಇದಕ್ಕೂ ಮುನ್ನ ಭಾರತೀಯ ಜನಸಂಘ ಇತ್ತು. ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಹೋರಾಟ ಮಾಡಲು ಮುಂದಾದಾಗ ಜನರಿಗೆ ವಿಶ್ವಾಸ ಬರಬೇಕು. ಸರ್ವಾಧಿಕಾರ ತೊಲಗಬೇಕು ಎಂದು ಜನಸಂಘವು ಜನತಾ ಪಕ್ಷದ ಜತೆ ವಿಲೀನವಾಯಿತು. ಆನಂತರ ಸಮಾಜವಾದಿ ಹಿನ್ನೆಲೆಯ ಗುಂಪುಗಳು ದ್ವಿಸದಸ್ಯತ್ವದ ನೆಪವೊಡ್ಡಿ ಆರ್​ಎಸ್​ಎಸ್ ಜತೆ ಸಂಬಂಧ ಕಳೆದುಕೊಳ್ಳಬೇಕೆಂದು ಷರತ್ತು ವಿಧಿಸಿ ಸಂಘದ ಶಾಖೆಗಳಿಗೆ ಹೋಗಬಾರದು ಎಂದು ಹೇಳಿದವು. ಆಗ ಹಿರಿಯರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್​ಕೃಷ್ಣ ಆಡ್ವಾಣಿ ಜನತಾ ಪಕ್ಷವನ್ನು ತೊರೆದು ಕರುಳಬಳ್ಳಿ ಸಂಬಂಧ ತುಂಡರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದರು. ಬಿಜೆಪಿ ಆರಂಭವಾದದ್ದೇ ಅಲ್ಲಿಂದ ಎಂದು ಹೇಳಿದರು.

ಅಂದು ರಾಜಕೀಯ ಎಂದರೆ ಕೆಸರು ಎನ್ನಲಾಗುತ್ತಿತ್ತು. ಆಗ ಅಟಲ್​ಜೀ ಅವರು ಒಂದು ಮಾತು ಹೇಳಿದ್ದರು. ಕೆಸರಿನಲ್ಲೇ ಕಮಲ ಅರಳಿದರೂ ಕೆಸರನ್ನು ಕಮಲ ಅಂಟಿಸಿಕೊಳ್ಳುವುದಿಲ್ಲ. ಇದೇ ಕಮಲದ ಸ್ವಭಾವ. ರಾಜಕೀಯವನ್ನು ಅಂಟಿಸಿಕೊಳ್ಳದೆ ರಾಜಕೀಯದ ಕೆಸರಿನಲ್ಲೇ ಕಮಲ ಅರಳಿಸುತ್ತೇವೆ ಎಂದು ಹೇಳಿದ್ದರು ಎಂದು ನೆನಪಿಸಿದರು.

ಚುನಾವಣೆಯಲ್ಲಿ ಕೇವಲ 2 ಸೀಟ್​ನಿಂದ ಅಭಿಯಾನ ಆರಂಭಿಸಲಾಯಿತು. 1984ರಿಂದ ಯಾವುದೇ ಪಕ್ಷಕ್ಕೆ ಲೋಕಸಭೆಯಲ್ಲಿ ಬಹುಮತ ಸಿಕ್ಕಿರಲಿಲ್ಲ. ನಮ್ಮ ನಿರಂತರ ಯಾನದಿಂದ ಇಂದು ನರೇಂದ್ರ ಮೋದಿ ನೇತೃತ್ವದಲ್ಲಿ ಸ್ವತಂತ್ರ ಬಹುಮತದ ಮೇಲೆ 2014ರಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿ ಜಗತ್ತೇ ಮೆಚ್ಚುವ ರೀತಿ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು.

Leave a Reply

Your email address will not be published. Required fields are marked *