ವೇದ ಅಧ್ಯಯನದಿಂದ ನೈಜ ಜ್ಞಾನ

ಚಿಕ್ಕಮಗಳೂರು: ಅಸ್ಪೃಶ್ಯತೆ, ಜಾತಿಗಳ ಸಂಕೋಲೆಯಲ್ಲಿ ಬಂಧಿಯಾಗಿರುವ ನಾವು ಅದನ್ನು ಮುರಿದು ಹೊರಬಂದು ನೈಜ ಜ್ಞಾನ ಅರ್ಥ ಮಾಡಿಕೊಳ್ಳಬೇಕಾದರೆ ವೇದಗಳ ಮೊರೆ ಹೋಗಬೇಕು ಎಂದು ಶಾಸಕ ಸಿ.ಟಿ.ರವಿ ಅಭಿಪ್ರಾಯಪಟ್ಟರು.

ನಗರದ ಜಗದ್ಗುರು ಶ್ರೀ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀದೇವಿ ಗುರುಕುಲದ ಪ್ರಥಮ ವಾರ್ಷಿಕೋತ್ಸವ, ಗಣ್ಯರಿಗೆ ಸನ್ಮಾನ ಮತ್ತು ಧಾರ್ವಿುಕ ಸಮಾರಂಭದಲ್ಲಿ ಮಾತನಾಡಿ, ವೇದದ ಇಡೀ ಜ್ಞಾನವನ್ನು ದಕ್ಕಿಸಿಕೊಂಡರೆ ವಿಶ್ವ ಭ್ರಾತೃತ್ವ ಬೆಳೆಯಲು ಸಾಧ್ಯ. ಮೂರ್ಖರುಗಳಿರಾ, ವೇದಗಳಿಗೆ ಹಿಂದಿರುಗಿ ಎಂದು ಸ್ವಾಮಿ ವಿವೇಕಾನಂದರು ಕರೆ ನೀಡಿದ್ದರು. ಅದು ಜಾತಿ ತಾರತಮ್ಯ ದೂರ ಮಾಡುವ ನೈಜ ಜ್ಞಾನದ ಬೆಳಕು. ಅದನ್ನು ಅರ್ಥ ಮಾಡಿಕೊಂಡರೆ ಸ್ವಾಭಿಮಾನದಿಂದ ಮೇಲೆದ್ದು ನಿಲ್ಲಲು ಸಾಧ್ಯ ಎಂದು ಹೇಳಿದರು.

ವಿಜ್ಞಾನ ಸೌಲಭ್ಯಗಳನ್ನು ಸೃಷ್ಟಿ ಮಾಡಬಲ್ಲದು. ಅಸಾಧ್ಯವಾದುದನ್ನು ಸಾಧ್ಯವಾಗಿಸಬಲ್ಲದು. ಆದರೆ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಜ್ಞಾನದ ಮೊರೆ ಹೋಗಲೇಬೇಕು. ವೇದದ ಪ್ರಾಥಮಿಕ ಅಧ್ಯಯನ, ರುದ್ರಪಠಣ ಮತ್ತು ಜ್ಯೋತಿಷ್ಯ ಪ್ರಾಥಮಿಕ ಹಂತದಲ್ಲಿ ಅದನ್ನು ಕಲಿಸುವ ಕೆಲಸಕ್ಕೆ ಮುಂದಾಗಿರುವ ಶ್ರೀದೇವಿ ಗುರುಕುಲದ ದಯಾನಂದ ಮೂರ್ತಿ ಶಾಸ್ತ್ರಿ ಅವರ ಪ್ರಯತ್ನ ಶ್ಲಾಘನೀಯ ಎಂದರು.

ಹೊಸತನ್ನು ಅಪ್ಪಿಕೊಳ್ಳುವ ಸಂದರ್ಭ ಜ್ಞಾನ ಭಂಡಾರವೇ ಆಗಿರುವ ವೇದ, ಆಗಮಗಳ ಬಗ್ಗೆ ನವಸಮಾಜ ನಿಷ್ಕಾಳಜಿ ಹೊಂದಿದೆ. ಇಂತ ಸಂದರ್ಭ ನಮ್ಮ ಪ್ರಾಚೀನ ಪರಂಪರೆಯನ್ನು ಸಂರಕ್ಷಿಸಿ ಜ್ಞಾನದ ಮಹತ್ವವನ್ನು ಭವಿಷ್ಯತ್ತಿಗೂ ಉಳಿಸುವ ಪ್ರಯತ್ನ ಆಗುತ್ತಿದೆ ಎಂದು ಹೇಳಿದರು. ಉಜ್ಜಯಿನಿ ಪೀಠದ ಶ್ರೀ ಸದ್ಧರ್ಮ ಸಿಂಹಾಸನಾಧೀಶ್ವರ ಪ್ರಸನ್ನ ದಾರುಕ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು.