ವಿಶ್ವಕರ್ಮರಿಂದ ಸೃಷ್ಟಿಗೆ ಜೀವಕಳೆ

ಚಿಕ್ಕಮಗಳೂರು: ಸೃಷ್ಟಿಯಲ್ಲಿ ನಾಗರಿಕತೆಗೆ ಜೀವಕೊಟ್ಟಿರುವ ವಿಶ್ವಕರ್ಮ ಸಮುದಾಯವು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಜಿಲ್ಲಾಡಳಿತದಿಂದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಗವಂತನ ಸೃಷ್ಟಿಯಲ್ಲಿ ಕಲ್ಲು, ಮರ, ಮಣ್ಣು ಸೃಷ್ಟಿಯಾದರೂ ಅದಕ್ಕೆ ಮೂರ್ತರೂಪ ನೀಡಿ ಜೀವಕಳೆಯನ್ನು ತಂದುಕೊಟ್ಟವರು ವಿಶ್ವಕರ್ಮರು. ಬೇಲೂರು, ಹಳೇಬೀಡು ದೇಗುಲ ಸೇರಿ ವಿಶ್ವಾದ್ಯಂತ ಅವರ ಕಲಾ ನೈಪುಣ್ಯ ಪಸರಿಸಿದೆ. ದೇವತೆಗಳ ಕಾಲದಲ್ಲಿಯೂ ವಿಶ್ವಕರ್ಮ ಸಮಾಜದವರ ಕುಶಲತೆಯನ್ನು ಸಮಾಜ ಮೆಚ್ಚುತ್ತ ಬಂದಿದೆ. ವಿಶ್ವಕರ್ಮನು ಬ್ರಹ್ಮನ ಪುತ್ರನಾಗಿ ವಿಶ್ವದ ವಾಸ್ತುಶಿಲ್ಪಿಯಾಗಿ ಕಾರ್ಯನಿರ್ವಹಿಸಿದ್ದಾನೆ ಎಂದರು.

ರಾಮಾಯಣದ ಲಂಕೆ ನಿರ್ವಿುಸಿದ್ದು, ಪುಷ್ಪಕ ವಿಮಾನ ತಯಾರಿಸಿದ್ದು ಅವರ ವಾಸ್ತು ತಂತ್ರಜ್ಞಾನಕ್ಕೆ ಸಾಕ್ಷಿ. ವಿಶ್ವಕರ್ಮ ಜನಾಂಗ ಆರ್ಥಿಕ, ಸಾಮಾಜಿಕವಾಗಿ ಬೆಳೆಯಲು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.

ವಿಶ್ವಕರ್ಮ ಜಯಂತಿ ಕುರಿತ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಎಚ್.ಟಿ.ನಾರಾಯಣಾಚಾರ್, ವೇದ, ಉಪನಿಷತ್, ಪುರಾಣಗಳಲ್ಲಿ ವಿಶ್ವಕರ್ಮ ಸಮಾಜದ ಸಾಧನೆ ಅಡಕವಾಗಿದೆ. ತಂತ್ರಜ್ಞಾನ ವಿಶ್ವದೆಲ್ಲೆಡೆ ಪ್ರಬಲವಾಗಲು ವಿಶ್ವಕರ್ಮರ ಕೊಡುಗೆ ಅಪಾರ ಎಂದರು.

ತಾಪಂ ಅಧ್ಯಕ್ಷ ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯರಾದ ವೈ.ಜಿ.ಸುರೇಶ್, ರಮೇಶ್, ಸಮಾಜ ಚಿಂತಕ ಕೆ.ಟಿ.ರಾಧಾಕೃಷ್ಣ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಪಂ ಸಿಇಒ ಸಿ.ಸತ್ಯಭಾಮಾ, ವಿಶ್ವಕರ್ಮ ಸಂಘದ ಅಧ್ಯಕ್ಷ ಮಹೇಶ್, ವಿಶ್ವಕರ್ಮ ನಿಗಮದ ಸದಸ್ಯ ರತೀಶ್, ವ್ಯವಸ್ಥಾಪಕ ಕೃಷ್ಣೇಗೌಡ ಇದ್ದರು.

ಕಾರ್ಯಕ್ರಮಕ್ಕೂ ಮೊದಲು ಶ್ರೀ ವಿಶ್ವಕರ್ಮ ಭಾವಚಿತ್ರವನ್ನು ತಾಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರದವರೆಗೆ ವಿವಿಧ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.