ಐಟಿ ದಾಳಿಯಾದ್ರೆ ಮೈತ್ರಿ ಸರ್ಕಾರಕ್ಕೇನು ಕಷ್ಟ?

ಚಿಕ್ಕಮಗಳೂರು: ಗುತ್ತಿಗೆದಾರರು, ಇಂಜಿನಿಯರ್​ಗಳ ಮನೆ ಮೇಲೆ ಐಟಿ ದಾಳಿ ಮಾಡಿದರೆ ಮೈತ್ರಿ ಸರ್ಕಾರದ ಮುಖ್ಯಮಂತ್ರಿ, ಸಚಿವರು, ಶಾಸಕರು ಯಾಕೆ ಕಂಪನಗೊಂಡಿದ್ದಾರೆ. ಇವರ ಮಧ್ಯೆ ಯಾವ ರೀತಿಯ ಸಂಬಂಧವಿದೆ? ರಾಜಕಾರಣಿಗಳ ರಕ್ತ ಸಂಬಂಧವಿರುವ ಗುತ್ತಿಗೆದಾರರು, ಇಂಜಿನಿಯರ್​ಗಳ ಮೇಲೆ ಐಟಿ ದಾಳಿ ಮಾಡಬಾರದೆಂಬ ನಿಯಮ ಇದೆಯೇ? ಎಂದು ಶಾಸಕ ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ.

ಮೈತ್ರಿ ಪಕ್ಷಗಳು ಭ್ರಷ್ಟಾಚಾರಿಗಳ ಪರ ಬೀದಿಗೆ ಇಳಿದು ರಾಜ್ಯದ ಘನತೆಗೆ ಧಕ್ಕೆ ತಂದಿದ್ದಾರೆ. ಗುತ್ತಿಗೆದಾರರು, ಇಂಜಿನಿಯರ್​ಗಳ ನಡುವೆ ಮೈತ್ರಿ ಸರ್ಕಾರ ಹೊಂದಿರುವ ಸಂಬಂಧದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಪ್ರಕರಣದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದರು.

ಗುಪ್ತಚರ ಇಲಾಖೆ ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಐಟಿ ದಾಳಿ ಮಾಹಿತಿಯನ್ನು ಮೊದಲೆ ಬಹಿರಂಗಪಡಿಸಿ ಭ್ರಷ್ಟರನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸ್ವಾಯತ್ತ ಸಂಸ್ಥೆ ಆದಾಯ ತೆರಿಗೆ ಇಲಾಖೆ ಕಾರ್ಯವೈಖರಿ ವಿರುದ್ಧ ಹೋರಾಟ ಮಾಡಿ ಸಂವಿಧಾನಕ್ಕೆ ಕಾಂಗ್ರೆಸ್-ಜೆಡಿಎಸ್ ಅಪಚಾರ ಮಾಡಿವೆ. ಮುಖ್ಯಮಂತ್ರಿಯಾಗಿ ಮುಂದುವರಿಯಲು ಕುಮಾರಸ್ವಾಮಿಗೆ ನೈತಿಕ ಹಕ್ಕಿಲ್ಲ. ಗುತ್ತಿಗೆದಾರರನ್ನು ಬಳಸಿಕೊಂಡು ಅಕ್ರಮ ದಾರಿಯಲ್ಲಿ ಚುನಾವಣೆ ಮಾಡಲೆತ್ನಿಸಿರುವುದು ಇದರಿಂದ ಬಹಿರಂಗವಾಗಿದೆ. ರಾಜ್ಯದ ಸಾಲ ಈಗ ಮೂರು ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ. ಸರ್ಕಾರದ ಖಜಾನೆ ಲೂಟಿ ಹೊಡೆದು ತಮ್ಮ ಮನೆ ತುಂಬಿಕೊಳ್ಳಲು ಇವರು ಅಧಿಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಪರವಾಗಿ ತಾವೇದ್ದೇವೆ ಎಂಬುದನ್ನು ಎರಡೂ ಪಕ್ಷಗಳು ಐಟಿ ವಿರುದ್ಧ ಬಹಿರಂಗವಾಗಿ ಹೋರಾಟ ಮಾಡಿ ಋಜುವಾತು ಪಡಿಸಿವೆ. ಮೈತ್ರಿ ಸರ್ಕಾರ ಮುಖಂಡರು ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಚ್.ಡಿ. ತಮ್ಮಯ್ಯ, ಜಿಲ್ಲಾ ವಕ್ತಾರ ವರಸಿದ್ದಿವೇಣುಗೋಪಾಲ್, ದೇವನೂರು ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜೀವ್ ಇದ್ದರು.

Leave a Reply

Your email address will not be published. Required fields are marked *