ವೃತ್ತಿ ಕೌಶಲ್ಯದಿಂದ ಜೀವನದಲ್ಲಿ ಯಶಸ್ಸು

ಚಿಕ್ಕಮಗಳೂರು: ಪ್ರತಿಯೊಬ್ಬರೂ ಆಧುನಿಕತೆಗೆ ತಕ್ಕಂತೆ ವೃತ್ತಿ ಕೌಶಲ್ಯ ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರದ ಕೈಗಾರಿಕಾ ಇಲಾಖೆ ಆವರಣದಲ್ಲಿ ಮೀನುಗಾರಿಕೆ ಮತ್ತು ಕೈಗಾರಿಕೆ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪರಿಕರ ವಿತರಿಸಿ ಮಾತನಾಡಿದರು.

ಯಾವುದೆ ಸರ್ಟಿಫಿಕೆಟ್​ನಿಂದ ಎಲ್ಲ ಕ್ಷೇತ್ರದಲ್ಲೂ ಬದುಕಲು ಆಗುವುದಿಲ್ಲ. ಆದರೆ ಯಾವುದೆ ಕಸುಬು ತಿಳಿದಿದ್ದರೆ ಪ್ರಪಂಚದಲ್ಲಿ ಎಲ್ಲಿಯಾದರೂ ಬದುಕಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತಕ್ಕೆ ಅಮೆರಿಕದಿಂದ ಗೋಧಿ ಆಮದು ಮಾಡಿಕೊಳ್ಳಬೇಕಿತ್ತು. ಆದರೆ ಇಂದು ದೇಶದಲ್ಲಿ ಹಲವು ಧಾನ್ಯಗಳನ್ನು ಬೆಳೆಯಲಾಗುತ್ತಿದ್ದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತಿದೆ ಎಂದರು.

ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಯಾವುದೆ ಕೂಲಿ ಕೆಲಸ ಮಾಡುವವರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ದೊರೆಯುತ್ತಿವೆ. ಹೀಗಾಗಿ ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಮೀನುಗಾರಿಕೆ ಇಲಾಖೆಯಿಂದ ಚಿಕ್ಕಮಗಳೂರು ತಾಲೂಕಿನಲ್ಲಿ ಮೀನು ಹಿಡಿಯುವ ಬಲೆಯನ್ನು 9 ಜನರಿಗೆ, ಫೈಬರ್ ಗ್ಲಾಸ್ ಹರಿಗೋಲನ್ನು 7 ಜನರಿಗೆ, ದ್ವಿಚಕ್ರವಾಹನ ಖರೀದಿಗೆ ಒಬ್ಬರಿಗೆ 10 ಸಾವಿರ ರೂ. ಹಾಗೂ ಕೈಗಾರಿಕೆ ಇಲಾಖೆಯಿಂದ ಗಾರೆ ಕೆಲಸ, ಮರಗೆಲಸ, ಕ್ಷೌರಿಕ, ಧೋಬಿ, ಟೈಲರಿಂಗ್ ಒಟ್ಟು 60 ಫಲಾನುಭವಿಗಳಿಗೆ ಉಪಕರಣ ನೀಡಲಾಯಿತು.

Leave a Reply

Your email address will not be published. Required fields are marked *