ಮೂವರು ಶಾಸಕರು ಮುಂಬೈನಲ್ಲಿದ್ದಾರೆ, ಯಾವ ಪಕ್ಷದವರು ಎಂದು ಹೇಳೋಲ್ಲ: ಸಚಿವ ಡಿ.ಕೆ.ಶಿವಕುಮಾರ್​

ಬೆಂಗಳೂರು: ಮೂರು ಜನ ಶಾಸಕರು ಮುಂಬೈನಲ್ಲಿದ್ದಾರೆ. ಅವರು ಯಾವ ಪಕ್ಷದವರು ಎಂಬುದು ಬೇಡ. ಹೆಸರು ಹೇಳಿದರೆ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೀರಿ, ಅವರಿಗೆ ತೊಂದರೆಯಾಗುತ್ತದೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಂಬೈಗೆ ಯಾರನ್ನು ಭೇಟಿಯಾಗಲು ಹೋಗಿದ್ದಾರೆಂದು ನನಗೆ ಗೊತ್ತಿಲ್ಲ. ಆದರೆ ಯಾವ ಹೋಟೆಲ್​ನಲ್ಲಿ ಇದ್ದಾರೆ ಎಂಬುದು ಗೊತ್ತಿದೆ ಎಂದರು. ಅಲ್ಲದೆ, ಬಿಜೆಪಿ ಆಪರೇಶನ್​ ಕಮಲಕ್ಕೆ ತಿರುಗೇಟು ನೀಡಲು ಸಿದ್ಧ. ಆ ಪಕ್ಷದ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.
ಬಿ.ಸಿ.ಪಾಟೀಲ್​ ಅವರು ಮಗಳ ಮದುವೆ ಮಾಡುತ್ತಿದ್ದು ಅದರ ಓಡಾಟದಲ್ಲಿದ್ದಾರೆ. ಅವರಿಗೂ ಮುಂದೆ ಒಳ್ಳೆ ಸ್ಥಾನ ಸಿಗುತ್ತದೆ. ಉಳಿದ ಶಾಸಕರೆಲ್ಲ ಅವರವರ ಕ್ಷೇತ್ರದಲ್ಲೇ ಇದ್ದಾರೆ ಎಂದು ತಿಳಿಸಿದರು.

ಬಿಜೆಪಿಯಿಂದ ಗೊಂದಲ ಸೃಷ್ಟಿ

ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ ಎಂದು ಹೇಳುವ ಮೂಲಕ ಬಿಜೆಪಿಯವರು ಗೊಂದಲ, ಅಸ್ಥಿರತೆ ಮೂಡಿಸುತ್ತಿದ್ದಾರೆ. ಮುಹೂರ್ತ ಫಿಕ್ಸ್​ ಮಾಡಿದ್ದೇವೆ, ಜೈಲಿಗೆ ಕಳುಹಿಸುತ್ತೇವೆ ಎಂದೆಲ್ಲ ಹೇಳುತ್ತಾರೆ. ಅವರಿಂದ ಆಗುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಆಸೆ ಪಡುತ್ತಿದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.

ದಿನೇಶ್​ ಗುಂಡೂರಾವ್​ ಶಾಸಕರಿಗೆ ಆಮಿಷ ನೀಡಿರುವ ಬಗ್ಗೆ ಎಸಿಬಿ, ಐಟಿಗೆ ದೂರು ನೀಡಿದ್ದಾರೆ. ಆ ತನಿಖೆ ಏನಾಗಿದೆ ಗೊತ್ತಿಲ್ಲ. ಸ್ಪೀಕರ್​ಗೂ ದೂರು ನೀಡಿದ್ದಾರೆ. ಯಾರಿಗೆ ಎಷ್ಟು ಹಣ ನೀಡಲಾಗುತ್ತಿದೆ ಎಂಬುದು ಮಾಧ್ಯಮಗಳಲ್ಲೂ ವರದಿಯಾಗಿದೆ ಎಂದು ಹೇಳಿದರು. ಆಪರೇಶನ್​ ಕಮಲಕ್ಕೆ ಒಳಗಾದರೆ ಎಸಿಬಿ ತನಿಖೆ ಆರಂಭಿಸುತ್ತದೆ ಎಂಬುದನ್ನೂ ಡಿಕೆಶಿ ಪರೋಕ್ಷವಾಗಿ ತಿಳಿಸಿದರು.

ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯೆ ಇಲ್ಲ
ಕರ್ನಾಟಕ ಮುಖ್ಯಮಂತ್ರಿಯನ್ನು ಪ್ರಧಾನಿ ಮೋದಿಯವರು ಕ್ಲರ್ಕ್​ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯೆ ನೀಡಲು ಸಚಿವ ಡಿ.ಕೆ.ಶಿವಕುಮಾರ್​ ನಿರಾಕರಿಸಿದರು. ಈಗಾಗಲೇ ಅದಕ್ಕೆ ದೇವೇಗೌಡರು, ಸಿದ್ದರಾಮಯ್ಯನವರು, ದಿನೇಶ್​ ಗುಂಡೂರಾವ್​ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಏನೂ ಹೇಳುವುದಿಲ್ಲ ಎಂದಿದ್ದಾರೆ.