ಚನ್ನಗಿರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾಗಿರುವ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿ ರೈತರಿಗೆ ಸುಲಭವಾಗಿ ಕೃಷಿಹೊಂಡ, ತಂತಿಬೇಲಿ, ಡಿಸೇಲ್ ಪಂಪ್ಸೆಟ್, ಟಾರ್ಪಾಲಿನ್ ಸೇರಿ ಇತರ ಪರಿಕರಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.
ತಾಲೂಕಿನ ಹಲಕನಾಳು ಗ್ರಾಮದಲ್ಲಿ ಬುಧವಾರ ಜಲನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉತ್ಪಾದನಾ ಪದ್ಧತಿ ಮತ್ತು ಆದಾಯೋತ್ಪನ್ನ ಚಟುವಟಿಕೆಯಡಿ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಎಲ್ಆರ್ಐ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಾಲಿನಲ್ಲಿ ಮುಂಗಾರು ಪ್ರಾರಂಭದಿಂದ ರೈತರಿಗೆ ಆಸರೆಯಾಗಿ ನಿಂತಿದೆ. ವಾಡಿಕೆ ಮಳೆ 136.9 ಮಿಮೀ ಗಿಂತ 179.1 ಮಿಮೀ ಮಳೆ ದಾಖಲಾಗಿದೆ. ಹವಾಮಾನ ಇಲಾಖೆ ವರದಿಯ ಪ್ರಕಾರ ಮುಂದಿನ ದಿನದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಮಾಡಿದ್ದು, ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ರಸಗೊಬ್ಬರ, ಕೀಟನಾಶಕ ಸಿಗುವಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಎವಾರ್ಡ್ ಯೋಜನೆ ವ್ಯಾಪ್ತಿಯ 63 ಸ್ವಸಹಾಯ ಸಂಘಗಳಿಗೆ ಒಟ್ಟು 31.50 ಲಕ್ಷ ರೂ. ಅಂದರೆ ಪ್ರತಿ ಸಂಘಕ್ಕೆ ತಲಾ 50 ಸಾವಿರದಂತೆ ಸುತ್ತು ನಿಧಿಯನ್ನು ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ವಿತರಣೆ ಮಾಡಲಾಗಿದೆ. ಭೂ ಸಂಪನ್ಮೂಲ ಅನ್ವೇಷಣೆ ನಡೆಸಿ 7100 ರೈತರಿಗೆ ಮಣ್ಣು ಆರೊಗ್ಯ ಚೀಟಿಯನ್ನು ನೀಡಲಾಗಿದ್ದು, ಕೊರತೆಯಾದ 15900 ಕೆಜಿಯ 13.62 ಲಕ್ಷ ಮೊತ್ತದ ಲಘು ಪೋಷಕಾಂಶವನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಮಗ್ರ ಕೃಷಿ ಪದ್ಧತಿಯಡಿ ಸುಮಾರು 60 ಫಲಾನುಭವಿಗಳಿಗೆ ಕೃಷಿಹೊಂಡ, ಜೇನು – ಕುರಿ ಸಾಕಾಣಿಕೆಗಾಗಿ 90 ಸಾವಿರ ಸಹಾಯಧನವನ್ನು ನೀಡಲಾಗುತ್ತಿದೆ. ತುಂತುರು ನೀರಾವರಿ ಘಟಕ ಮತ್ತು ಕೃಷಿ ಯಾಂತ್ರೀಕರಣ ಪರಿಕರಗಳನ್ನು ಇಲಾಖೆಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ರೈತರು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಮರವಂಜಿ ಗ್ರಾಪಂ ಅಧ್ಯಕ್ಷ ರುದ್ರನಾಯ್ಕ, ಪಾಂಡೋಮಟ್ಟಿ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಸಂಶೋಧನ ನಿರ್ದೇಶಕ ಡಾ. ದುಶ್ಯಂತ್ ಕುಮಾರ್, ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿತ್ತಾಲ, ಉಪ ಕೃಷಿ ನಿರ್ದೇಶಕ ರೇವಣ ಸಿದ್ದನಗೌಡ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಅರುಣ್ಕುಮಾರ್ ಇತರರು ಇದ್ದರು.