100 ಆಶ್ರಯ ಮನೆ ಮಂಜೂರು

ನಂಜನಗೂಡು: ಅತ್ಯಂತ ಹಿಂದುಳಿದ ಬಡಾವಣೆಗಳಲ್ಲಿ ವಾಸಿಸುವ ವಸತಿರಹಿತ ಕುಟುಂಬಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 100 ಆಶ್ರಯ ಮನೆಗಳು ಮಂಜೂರಾಗಿದೆ ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು.

ನಗರದ ಅಶೋಕಪುರಂ ಬಡಾವಣೆಯಲ್ಲಿ ಗುರುವಾರ ನಿವಾಸಿಗಳ ಕುಂದುಕೊರತೆ ಆಲಿಸಿದ ನಂತರ ಮಾತನಾಡಿದ ಅವರು, ಅಶೋಕಪುರಂ, ತ್ಯಾಗರಾಜ ಕಾಲನಿ ಹಾಗೂ ನೀಲಕಂಠನಗರ ಬಡಾವಣೆಗಳಲ್ಲಿ ಬಡ ಕುಟುಂಬಗಳಿವೆ. ಅವರಿಗೆ ಸೂಕ್ತ ವಸತಿ ಇಲ್ಲ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಶಂಕರಪುರ ಬಡಾವಣೆಯಲ್ಲಿ 276 ಆಶ್ರಯ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಮುಂದಿನ ಹಂತದಲ್ಲಿ 100 ಆಶ್ರಯ ಮನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.

ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ನಿವಾಸಿಗಳು ಭಿನ್ನವಾದ ಸಮಸ್ಯೆ ಎದುರಿಸುತ್ತಿದ್ದಾರೆ. ನಗರೋತ್ಥಾನ ಯೋಜನೆ ಅನುದಾನವನ್ನು ಎಲ್ಲ ವಾರ್ಡ್‌ಗಳಿಗೂ ಸಮನಾಗಿ ಹಂಚಿಕೆ ಮಾಡುವುದರಿಂದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲ್ಲ. ಪ್ರತಿ ವಾರ್ಡಿಗೆ ಅಗತ್ಯಾನುಸಾರ ಅನುದಾನ ಹಂಚಿಕೆ ಮಾಡುವುದರಿಂದ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ ಎಂದರು.

ಮುಂಬರುವ ನಗರಸಭೆ ಚುನಾವಣೆಗೂ ಮುನ್ನ ಪ್ರತಿ ವಾರ್ಡಿನಲ್ಲೂ ಜನಪ್ರಣಾಳಿಕೆ ಸಿದ್ಧಪಡಿಸಿ ಅವುಗಳನ್ನು ಸಾಕಾರಗೊಳಿಸುವ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ನಮಗೆ ಚುನಾವಣೆ ಮುಖ್ಯವಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಬಳಿಕ ನೀಲಕಂಠನಗರ ಹಾಗೂ ತ್ಯಾಗರಾಜ ಕಾಲನಿಯ ವಾರ್ಡ್‌ಗಳಲ್ಲಿ ಸಂಚರಿಸಿ ಸಾರ್ವಜನಿಕರ ಅಹವಾಲು ಆಲಿಸಿದರು. ಬಿಜೆಪಿ ನಗರಾಧ್ಯಕ್ಷ ಬಾಲಚಂದ್ರು, ರಾಜ್ಯ ಸಮಿತಿ ಸದಸ್ಯ ಎನ್.ಆರ್.ಕೃಷ್ಣಪ್ಪಗೌಡ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಧುರಾಜ್, ರಂಗಸ್ವಾಮಿ ಇತರರಿದ್ದರು.