ಹುಬ್ಬಳ್ಳಿ: ಧಾರಾಕಾರ ಮಳೆಗೆ ಕ್ಷೇತ್ರದ ಅನೇಕ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ಘಟನೆಗಳು ನಡೆದಿವೆ. ಅಲ್ಲದೆ ಒಬ್ಬ ವ್ಯಕ್ತಿ ರಭಸಕ್ಕೆ ಸಿಲುಕಿ ಕಣ್ಮರೆಯಾಗಿದ್ದಾರೆ. ಇದು ಮನಸ್ಸಿಗೆ ನೋವುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಾಗ್ರತರಾಗಿ ನಿರಂತರ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಖಡಕ್ ಸೂಚನೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಎಲ್ಲೆಡೆ ವರುಣಾರ್ಭಟ ಆರಂಭವಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಅಧಿಕ ಪ್ರಮಾಣದ ಮಳೆಯಾಗುತ್ತಿದೆ. ಕ್ಷೇತ್ರದ ಹುಸೇನ್ ಸಾಬ ಕಳಸದ ಕಣ್ಮರೆಯಾಗಿದ್ದಾರೆ. ಅವರ ಶೋಧ ಕಾರ್ಯ ನಡೆಯುತ್ತಿದೆ. ಅಧಿಕಾರಿಗಳು ಸ್ಥಳದಲ್ಲಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾನಿಯಾದ ಮನೆಗಳ ಸಮೀಕ್ಷೆ ಕೈಗೊಂಡು ಸರ್ಕಾರದಿಂದ ಪರಿಹಾರ ಕೊಡಿಸಬೇಕು. ನಿರ್ಗತಿಕರಿಗೆ ಗಂಜಿಕೇಂದ್ರ ತೆರೆದು ಆಶ್ರಯ ನೀಡಬೇಕೆಂದು ಸೂಚಿಸಿದ್ದಾರೆ.
ಧಾರವಾಡ ಜಿಲ್ಲೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಜನರು ಸುರಕ್ಷಿತವಾಗಿರಬೇಕು. ಹಳ್ಳ, ಕೊಳ್ಳಗಳಿಗೆ ಇಳಿಯಬಾರದು. ಮಳೆನೀರು ತಗ್ಗಿದ ನಂತರ ಹಳ್ಳಗಳನ್ನು ದಾಟಬೇಕು. ಜನರ ಸುರಕ್ಷತೆಯೇ ಮೊದಲ ಆದ್ಯತೆಯಾಗಿದ್ದು, ತುರ್ತು ಸಂದರ್ಭದಲ್ಲಿ ಪಾಲಿಕೆ ಸಹಾಯವಾಣಿ ದಿನದ 24ಗಂಟೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.