ಶಾಂತಿ ನೆಲೆಗೊಳ್ಳಲು ರಕ್ಷಣಾ ವ್ಯವಸ್ಥೆ ಪೂರಕ

ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶದಲ್ಲಿ ಶಾಂತಿ ನೆಲೆಗೊಳ್ಳಲು ರಕ್ಷಣಾ ವ್ಯವಸ್ಥೆ ಬಲಗೊಳ್ಳುವುದು, ನೆರೆಹೊರೆಯ ರಾಷ್ಟ್ರಗಳ ಜತೆಗೆ ಉತ್ತಮ ಬಾಂಧವ್ಯ ಹೊಂದುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ವಿದೇಶಾಂಗ ನೀತಿಯಲ್ಲಿ ವಿಶೇಷ ಮಾದರಿ ಅಳವಡಿಸಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಎಂ.ಜೆ.ಅಕ್ಬರ್ ಹೇಳಿದರು.
ಮಣಿಪಾಲದಲ್ಲಿ ಮಾಹೆ ಜಿಯೋಪಾಲಿಟಿಕ್ಸ್ ಆ್ಯಂಡ್ ಇಂಟರ್‌ನ್ಯಾಶನಲ್ ರಿಲೇಶನ್ಸ್ ವತಿಯಿಂದ ಹೊಟೇಲ್ ವ್ಯಾಲಿ ವ್ಯೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಉಪನ್ಯಾಸದಲ್ಲಿ ‘21ನೆಯ ಶತಮಾನದಲ್ಲಿ ಭಾರತದ ವಿದೇಶಾಂಗ ನೀತಿ’ ವಿಷಯ ಕುರಿತು ಅವರು ಮಾತನಾಡಿದರು.
ಒಂದು ಸರ್ಕಾರ ಯಾವುದೇ ನೀತಿ ಅನುಸರಿಸುವಾಗ ಮುಖ್ಯವಾಗಿ ದೇಶದ ಶಾಂತಿ ಜನರ ರಕ್ಷಣೆ ಗಮನದಲ್ಲಿರಿಸಿಕೊಂಡು ಹೋಗಬೇಕಾದ್ದು ಅನಿವಾರ್ಯ ಮತ್ತು ಪ್ರಬುದ್ಧತೆಯಾಗಿರುತ್ತದೆ. ಆ ನಿಟ್ಟಿನಲ್ಲಿ ನಾವು ಸಾಗುತಿದ್ದೇವೆ ಎಂದು ಹೇಳಿದರು. ಸಹಯೋಗ, ಶಾಂತಿ, ಸಮೃದ್ಧಿ ನಮ್ಮ ಸರ್ಕಾರದ ಮುಖ್ಯ ನೀತಿ. ಶಾಂತಿ ವಿನಾ ಸಮೃದ್ಧಿ ಮತ್ತು ಅಭಿವೃದ್ಧಿ ಅಸಾಧ್ಯ ಎಂದರು.
ಮಣಿಪಾಲ ಮಾಹೆ ಸಹಾಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಕುಲಪತಿ ಡಾ.ಎಚ್.ವಿನೋದ ಭಟ್, ಮಾಹೆ ಜಿಯೋಪಾಲಿಟಿಕ್ಸ್ ಆ್ಯಂಡ್ ಇಂಟರ್‌ನ್ಯಾಶನಲ್ ರಿಲೇಶನ್ಸ್ ವಿಭಾಗದ ಮುಖ್ಯಸ್ಥ ಡಾ.ಅರವಿಂದಕುಮಾರ್ ಉಪಸ್ಥಿತರಿದ್ದರು. ನಂದಕಿಶೋರ್ ವಂದಿಸಿ, ಡಾ.ಮೌನೀಶ್ ತೊರಂಗ್‌ಬೀಮ್ ಕಾರ್ಯಕ್ರಮ ನಿರೂಪಿಸಿದರು.

ಸಮುದ್ರ, ಆಕಾಶಕ್ಕೆ ಪೈಪೋಟಿ:  ಪ್ರಸ್ತುತ ಕಾಲಘಟ್ಟದಲ್ಲಿ ವಿಜ್ಞಾನ, ತಂತ್ರಜ್ಞಾನ ಬಗ್ಗೆ ಭೂಮಿ ಮೇಲೆ ಕೇಂದ್ರೀಕರಿಸಿ ಹೆಚ್ಚಿನ ಸ್ಪರ್ಧೆಗಳು ನಡೆಯುತ್ತಿವೆ. ಅಧಿಕಾರ ಕೇಂದ್ರಿತ ಕಾರ್ಯತಂತ್ರಗಳನ್ನು ಒಳಗೊಂಡಂತೆ 21ನೇ ಶತಮಾನದಲ್ಲಿ ಮುಂದಿನ ಪೈಪೋಟಿ ಸಮುದ್ರ ಮತ್ತು ಆಕಾಶದಲ್ಲಿ ನಡೆಯಲಿದೆ. ಹಿಂದೆ ಸಮುದ್ರ ಮತ್ತು ಆಕಾಶದ ವಿಚಾರದಲ್ಲಿ ಘರ್ಷಣೆ ಇರಲಿಲ್ಲ, ಭವಿಷ್ಯದಲ್ಲಿ ಈ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಅಕ್ಬರ್ ಅಭಿಪ್ರಾಯಪಟ್ಟರು.

ಭಾರತ ಮಹಿಳಾ ಸಬಲೀಕರಣದತ್ತ:  ಮಹಿಳೆಯರನ್ನು ಗುರಿಯಾಗಿರಿಸಿಕೊಂದು ಕೇಂದ್ರ ಸರ್ಕಾರವು ಮುದ್ರಾದಂಥ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ. ಸಶಕ್ತ ಮಹಿಳಾ ಸಮಾಜದತ್ತ ನಾವು ಸಾಗುತ್ತಿದ್ದೇವೆ, 130 ಮಿಲಿಯನ್ ಮುದ್ರಾ ಯೋಜನೆಯ ಫಲಾನುಭವಿಗಳಲ್ಲಿ ಶೇ.80 ಮಹಿಳೆಯರಿದ್ದಾರೆ. ಇದು ದೇಶವು ಮಹಿಳಾ ಸಬಲೀಕರಣದತ್ತ ಸಾಗುವ ಪರಿ ಎಂದು ಕೇಂದ್ರ ಸಚಿವರು ಬಣ್ಣಿಸಿದರು. ಜನಧನ್ ಖಾತೆ ಸೇರಿದಂತೆ, ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳಲ್ಲಿ ಮಹಿಳಾ ಫಲಾನುಭವಿಗಳ ಪಾತ್ರ ಅನನ್ಯ ಎಂದು ಬಣ್ಣಿಸಿದರು. ಭವಿಷ್ಯದ ಭಾರತ ಮಹಿಳಾ ಸಬಲೀಕರಣದತ್ತ ಸಾಗುತ್ತದೆ, ಇದು ಜಗತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಭಾರತ ಪವರ್ ಆಫ್ ಏಷ್ಯಾ:  ನಮ್ಮ ದೇಶ ಅಭಿವೃದ್ಧಿಶೀಲ ವಿದೇಶಾಂಗ ನೀತಿ ಅಳವಡಿಸಿಕೊಂಡಿದೆ ಮತ್ತು ಅಭಿವೃದ್ಧಿ ಸ್ನೇಹಿಯಾಗಿ ಇತರೆ ರಾಷ್ಟ್ರಗಳೊಂದಿಗೆ ಬೆರೆಯುತ್ತಿದೆ. ಮುಕ್ತ ಪ್ರಜಾಪ್ರಭುತ್ವ, ವೈಯಕ್ತಿಕ ಸಾಕ್ಷರತೆ, ಸರ್ವಧರ್ಮ ವಿಶ್ವಾಸ ಮತ್ತು ಸಮಾನತೆ, ಲಿಂಗ ಸಮಾನತೆ ದೇಶದ ವೈಶಿಷ್ಟೃ. ಆರ್ಥಿಕ ಸದೃಡತೆ, ಸಾಮಾಜಿಕ ಬದ್ಧತೆಯ ವಿಚಾರದಲ್ಲಿ ಭಾರತ ಭವಿಷ್ಯದಲ್ಲಿ ಕೇಂದ್ರ ಸ್ಥಾನಕ್ಕೆ ಏರಲಿದ್ದು, ಪವರ್ ಏಷ್ಯಾವಾಗಿ ರಾರಾಜಿಸಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.