ಸೈಕಲ್​ ಹರಿಸಿ ಕೋಳಿಯ ಕೊಂದ 6 ವರ್ಷದ ಬಾಲಕ, ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತಂದ!

ಸಾಯ್​ರಂಗ್​ (ಮಿಜೋರಾಂ): ಆರು ವರ್ಷದ ಬಾಲಕನೊಬ್ಬ ಸೈಕಲ್​ ತುಳಿಯುವಾಗ ಆಕಸ್ಮಿಕವಾಗಿ ಕೋಳಿ ಮರಿ ಮೇಲೆ ಹತ್ತಿಸಿದ. ಅದು ಸತ್ತು ಹೋದರೂ, ಗಾಯಗೊಂಡಿದೆ ಎಂದೇ ನಂಬಿ ಅದಕ್ಕೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತಂದ. ಜತೆಗೆ ವೈದ್ಯರಿಗೆ 10 ರೂ. ಕೊಟ್ಟು, ಕೋಳಿಗೆ ಚಿಕಿತ್ಸೆ ನೀಡುವಂತೆ ಆಗ್ರಹಿಸಿದ.
ಮಿಜೋರಾಂನ ಸಾಯ್​ರಂಗ್​ ನಿವಾಸಿ ಧೀರಜ್​ ಛೇಟ್ರಿ ಅವರ 6 ವರ್ಷದ ಪುತ್ರ ಮುಗ್ಧತೆ ತೋರಿದ ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅದೇನಾಯಿತೆಂದರೆ, ಧೀರಜ್​ ಅವರ ಪುತ್ರ ಮನೆಯ ಮುಂದೆ ಸೈಕಲ್​ ತುಳಿಯುತ್ತಿದ್ದ. ಅದೇ ವೇಳೆಗೆ ನೆರೆಮನೆಯವರ ಕೋಳಿ ಮರಿ ಅಡ್ಡ ಬಂದಿದೆ. ಈತ ಅದರ ಮೇಲೆ ಸೈಕಲ್​ ಹತ್ತಿಸಿದ್ದಾನೆ. ಅದು ಸ್ಥಳದಲ್ಲೇ ಸತ್ತು ಹೋಗಿದೆ. ಆದರೆ, ಇದನ್ನು ಅರಿಯದ ಆತ ಒಂದು ಕೈಯಲ್ಲಿ ಕೋಳಿ ಹಿಡಿದುಕೊಂಡು ಮನೆಗೆ ಹೋಗಿ, ಇದಕ್ಕೆ ಗಾಯವಾಗಿದೆ, ಚಿಕಿತ್ಸೆ ಕೊಡಿಸಲು ಬರುವಂತೆ ತಂದೆಯನ್ನು ಕರೆದಿದ್ದಾನೆ.

ಆದರೆ, ಧೀರಜ್​ ಛೇಟ್ರಿ ಮಗನಿಗೆ 10 ರೂ. ಕೊಟ್ಟು, ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸುವಂತೆ ಹೇಳಿದ್ದಾರೆ. ಅದರಂತೆ ಬಾಲಕ ಒಂದು ಕೈಯಲ್ಲಿ ಕೋಳಿ ಮರಿ ಇನ್ನೊಂದು ಕೈಯಲ್ಲಿ 10 ರೂ. ಹಿಡಿದುಕೊಂಡು, ಹತ್ತಿರದ ಆಸ್ಪತ್ರೆಗೆ ಹೋಗಿ ಅದಕ್ಕೆ ಚಿಕಿತ್ಸೆ ಕೊಡುವಂತೆ ವೈದ್ಯರಿಗೆ ದುಂಬಾಲು ಬಿದ್ದಿದ್ದಾನೆ. ಕೋಳಿಗೆ ಚಿಕಿತ್ಸೆ ಕೊಡಲು ತಾನು ತಂದಿರುವ ಹಣ ಕಡಿಮೆ ಬಿದ್ದರೆ, ಇನ್ನಷ್ಟು ಹಣ ತರುತ್ತೇನೆ ಎಂದು ಹೇಳಿದ್ದಾನೆ.

ಕೊನೆಗೆ ಆಸ್ಪತ್ರೆಗೆ ತೆರಳಿದ ಧೀರಜ್​ ಛೇಟ್ರಿ ಕೋಳಿ ಸತ್ತಿರುವುದಾಗಿಯೂ, ಅದಕ್ಕೆ ಚಿಕಿತ್ಸೆ ಕೊಡಿಸಿದರೂ ಅದು ಬದುಕುವುದಿಲ್ಲವೆಂದೂ ಹೇಳಿದ್ದಾರೆ. ಆದರೆ ತಮ್ಮ ಪುತ್ರ ತನ್ನಿಂದ ಏನೋ ಮಹಾಪರಾಧವಾಯಿತು ಎಂಬ ಪಾಪಪ್ರಜ್ಞೆಯೊಂದಿಗೆ ಆಸ್ಪತ್ರೆಗೆ ಕೊಂಡೊಯ್ದು ಕೋಳಿಗೆ ಚಿಕಿತ್ಸೆ ಕೊಡಿಸುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ಆದರೂ ಆತ ಹಾಗೆ ನಡೆದುಕೊಂಡಿದ್ದರಿಂದ ಸಂತೋಷವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

One Reply to “ಸೈಕಲ್​ ಹರಿಸಿ ಕೋಳಿಯ ಕೊಂದ 6 ವರ್ಷದ ಬಾಲಕ, ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತಂದ!”

Leave a Reply

Your email address will not be published. Required fields are marked *