ಬಂದ್‌ಗೆ ದಕ್ಷಿಣ ಕನ್ನಡ ಮಿಶ್ರ ಪ್ರತಿಕ್ರಿಯೆ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ದಿನಬಳಕೆ ವಸ್ತು ದರ ಏರಿಕೆ ಖಂಡಿಸಿ ಸೋಮವಾರ ಕಾಂಗ್ರೆಸ್ ಕರೆನೀಡಿದ್ದ ರಾಷ್ಟ್ರವ್ಯಾಪಿ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಗಳೂರು ಹಾಗೂ ಇತರೆಡೆಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದರೂ, ಜನಜೀವನದ ಮೇಲೆ ಬಂದ್ ಪರಿಣಾಮ ಬೀರಲಿಲ್ಲ.
ಮಂಗಳೂರಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಪುತ್ತೂರು , ಸುಬ್ರಹ್ಮಣ್ಯ ಹಾಗೂ ಇನ್ನಿತರ ಕಡೆಗಳಲ್ಲಿ ಖಾಸಗಿ ಬಸ್ಸುಗಳು ಓಡಾಟ ನಡೆಸಿವೆ. ಶಾಲಾ -ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬಲವಂತದ ಬಂದ್ ಮಾಡಲಾಗುತ್ತಿದೆಯೆಂದು ಬಿಜೆಪಿ ಕಾರ್ಯಕರ್ತರು , ನಾಯಕರು ವಿರೋಧ ವ್ಯಕ್ತಪಡಿಸಿ ಪ್ರಕರಣಗಳು ನಡೆದಿವೆ.

ಶಾಸಕ ನಾಕ್ ಕಾರಿಗೆ ಕಲ್ಲು:  ಬಂಟ್ವಾಳದ ಶಾಸಕ ರಾಜೇಶ್ ನಾಕ್ ಕಾರಿನ ಮೇಲೆ ಬಂದ್ ನಿರತರು ಕಲ್ಲು ತೂರಾಟ ನಡೆಸಿದ್ದು, ಶಾಸಕರು ಬಂಟ್ವಾಳ ಠಾಣೆಗೆ ದೂರು ನೀಡಿದ್ದಾರೆ. ರಸ್ತೆಗಿಳಿದ ಮತ್ತು ರಸ್ತೆ ಬದಿ ನಿಲ್ಲಿಸಿದ್ದ ಕೆಲ ಬಸ್‌ಗಳ ಮೇಲೆ, ತೆರೆದಿದ್ದ ಹೋಟೆಲ್ ಮೇಲೆ ಕಲ್ಲು ತೂರಾಟ ನಡೆದಿವೆ. ಬಂದ್ ನೆಪದಲ್ಲಿ ಬಲವಂತವಾಗಿ ಅಂಗಡಿ ಮುಚ್ಚಿಸುವುದು, ಬಸ್ ನಿಲ್ಲಿಸುವಂತೆ ಇಲ್ಲ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದರೂ ಕೆಲವು ಕಿಡಿಗೇಡಿಗಳು ಅಗತ್ಯ ಸೇವೆಯಾದ ಮೆಡಿಕಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಮುಂದಾಗಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಲು ಕಾರಣವಾಯಿತು.

ಮಂಗಳೂರಿನಲ್ಲಿ ಸ್ಪಂದನೆ ಇಲ್ಲ!:  ಮಂಗಳೂರಿನಲ್ಲಿ ಬಂದ್‌ಗೆ ಪೂರ್ಣ ಸ್ಪಂದನೆ ಕಂಡುಬರಲಿಲ್ಲ. ಕೆಲವೆಡೆ ಎಂದಿನಂತೆ ಅಂಗಡಿ ತೆರೆದಿತ್ತು. ಬಸ್‌ಗಳು ರಸ್ತೆಗಿಳಿಯಲಿಲ್ಲ, ಖಾಸಗಿ ಕಚೇರಿಗಳು ಮುಚ್ಚಿದ್ದರೆ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿವೆ. ಆಟೋಗಳು ಸಂಚರಿಸಿದವು. ತೊಕ್ಕೊಟ್ಟು ಉಳ್ಳಾಲ ಮುಡಿಪು ಭಾಗದಲ್ಲೂ ವ್ಯಾಪಾರ, ಭಾಗಶಃ ಬಂದ್ ಆಗಿದ್ದವು. ದೇರಳಕಟ್ಟೆ ಹಾಗೂ ನಾಟೆಕಲ್ಲು ಮಧ್ಯೆ ಬೆಳಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮುಚ್ಚಿಸುವುದು, ವಾಹನಗಳನ್ನು ನಿಲ್ಲಿಸುವ ಕೆಲಸಕ್ಕೆ ಮುಂದಾದಾಗ ಕೊಣಾಜೆ ಎಸ್‌ಐ ಆಕ್ಷೇಪಿಸಿದ್ದು, ಮಾತಿನ ಚಕಮಕಿಗೆ ಕಾರಣವಾಯಿತು. ಮೂಲ್ಕಿ ಹಾಗೂ ಮೂಡುಬಿದಿರೆಯಲ್ಲಿ ಭಾಗಶಃ ಅಂಗಡಿಗಳು ತೆರೆದಿದ್ದು, ರಿಕ್ಷಾ, ವಾಹನ ಓಡಾಡುತ್ತಿದ್ದವು. ಬಸ್ ಮಾತ್ರವೇ ಬಂದ್ ಆಗಿತ್ತು. ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ಕಾರನ್ನು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೆನ್ನಟ್ಟಿದರು. ಬಂದ್‌ಗೆ ಪೊಲೀಸರು ಸಹಕಾರ ನೀಓಡುತ್ತಿದ್ದಾರೆಂಬ ಆಕ್ಷೇಪದಲ್ಲಿ ಶಾಸಕರು ಮಂಗಳೂರು ಪೊಲೀಸ್ ಆಯುಕ್ತರ ಜತೆ ವಾಗ್ವಾದ ನಡೆಸಿದರು.

ಸುಳ್ಯ, ಪುತ್ತೂರು ಮಿಶ್ರ ಪ್ರತಿಕ್ರಿಯೆ:  ಸುಳ್ಯದಲ್ಲಿ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಸರ್ಕಾರಿ ಬಸ್ ಹಾಗೂ ಸರ್ವಿಸ್ ವ್ಯಾನ್ ಸಂಚಾರ ಸ್ಥಗಿತಗೊಂಡಿತ್ತು. ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ನಗರಾದ್ಯಂತ ಸಂಚರಿಸಿ ಬಂದ್ ಮಾಡುವಂತೆ ಮನವಿ ಮಾಡಿದರು. ಪುತ್ತೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತ ವಾಯಿತು. ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಬಂದ್ ಮಾಡುವಂತೆ ಒತ್ತಾಯಿಸಿದಾಗ ನಗರ ಪೊಲೀಸರು ಮಧ್ಯಪ್ರವೇಶಿಸಿ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಿಂದ ತೆರಳಿದರು.
ಬೆಳ್ತಂಗಡಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವು ಅಂಗಡಿಗಳಲ್ಲಿ ಒಂದು ಗಂಟೆ ಹೆಚ್ಚು ವ್ಯಾಪಾರ ಮಾಡುವುದಾಗಿ ನಾಮ ಫಲಕ ಅಳವಡಿಸಿದ್ದರು. ಕಕ್ಕಿಂಜೆ, ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಮೆರವಣಿಗೆ. ಇಂದಬೆಟ್ಟು, ಲಾಯಿಲದಲ್ಲಿ ಟಯರ್‌ಗೆ ಬೆಂಕಿ ಹಚ್ಚಿದ್ದು ಕಂಡುಬಂತು. ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಶೇ.50ರಷ್ಟು ಅಂಗಡಿಗಳು ಮುಚ್ಚಿದ್ದು, ಸರ್ಕಾರಿ ಬಸ್ ಓಡಾಟ ನಡೆಸಲಿಲ್ಲ. ಬೆಂಗಳೂರಿನಿಂದ ಎರಡು ಬಸ್ ಮಾತ್ರ ಬಂದಿದ್ದವು. ಕುಕ್ಕೆ ಕ್ಷೇತ್ರದಲ್ಲೂ ಜನಸಂಖ್ಯೆ ಸಾಮಾನ್ಯ. ವಿಟ್ಲ ಪರಿಸರದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿಯವರೊಂದಿಗೆ ಮಾತುಕತೆ ನಡೆಸಿ ಬೆಳಗ್ಗೆ 9ರ ಬಳಿಕ ಬಂದ್ ಮಾಡಿಸುವಲ್ಲಿ ಯಶಸ್ವಿಯಾದರು.

ಪ್ರತಿಭಟನೆ ನಿರತ 60 ಮಂದಿ ಅರೆಸ್ಟ್:  ಮಂಗಳೂರು ನಗರದಲ್ಲಿ ಬಂದ್ ವೇಳೆ ಪ್ರತಿಭಟನೆಯಲ್ಲಿ ತೊಡಗಿದ ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರು ಸೇರಿದಂತೆ 60 ಮಂದಿಯನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ. ಸೋಮವಾರ ಬೆಳಗ್ಗೆ ಕಾಂಗ್ರೆಸ್ ಮುಖಂಡರು, ಕಾರ‌್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟು ಕಂಕನಾಡಿಯಲ್ಲಿ ಸೇರಿದ್ದರು. ಈ ಸಂದರ್ಭ ಕದ್ರಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ 49ಮಂದಿಯನ್ನು ಬಂಧಿಸಿ, ಮಧ್ಯಾಹ್ನ ಬಳಿಕ ಬಿಡುಗಡೆ ಮಾಡಿದ್ದಾರೆ. ಉಳಿದ 11ಮಂದಿಯನ್ನು ವಿವಿಧ ಠಾಣೆಗಳಲ್ಲಿ ಬಂಧಿಸಲಾಗಿದೆ.

ಕೇಸು : ಬಂದ್ ವೇಳೆ ಮಂಗಳೂರು ಶಿವಭಾಗ್‌ನ ಹೋಟೆಲ್ ಮೇಲೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸೋಮವಾರ ಬೆಳಗ್ಗೆ ನಂತೂರು ಕಡೆಯಿಂದ ಬೆಂದೂರ್‌ವೆಲ್ ಕಡೆಗೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳ ಪೈಕಿ ಓರ್ವ ಹೋಟೆಲ್ ಮೇಲೆ ಕಲ್ಲೆಸೆದಿದ್ದಾನೆ. ಹೊರಗೆ ಓಡಿ ಬಂದ ಸಿಬ್ಬಂದಿ, ಹಿಡಿಯಲು ಯತ್ನಿಸಿದಾಗ ದುಷ್ಕರ್ಮಿ ಬೈಕ್‌ನಲ್ಲಿ ಪರಾರಿಯಾದ. ಕಲ್ಲು ತೂರಾಟದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಅದರ ಕ್ಲಿಪ್ಪಿಂಗ್ ಪೊಲೀಸರಿಗೆ ನೀಡಲಾಗಿದೆ.