ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಕ್ಕೆ ಎಂಟು ವಿಕೆಟ್​ಗಳ ಗೆಲುವು; ಹೊಸ ದಾಖಲೆ ನಿರ್ಮಿಸಿದ ಕ್ಯಾಪ್ಟನ್​ ಮಿಥಾಲಿ ರಾಜ್​

ಮುಂಬೈ: ಭಾರತದ ಮಹಿಳಾ ಕ್ರಿಕೆಟ್​ ತಂಡದ ಟೆಸ್ಟ್​ ಹಾಗೂ ಏಕದಿನ ಪಂದ್ಯಾವಳಿಯ ನಾಯಕಿ ಮಿಥಾಲಿ ರಾಜ್​ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 20ಕ್ಕಿಂತಲೂ ಹೆಚ್ಚು ವರ್ಷ ನೆಲೆನಿಂತ ಮೊದಲ ಮಹಿಳಾ ಕ್ರಿಕೆಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಂದು ವಡೋದರಾದ ರಿಲಯನ್ಸ್​ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯಾವಳಿಯಲ್ಲಿ ಆಡುವ ಮೂಲಕ ಈ ಸಾಧನೆಯನ್ನು ತಮ್ಮ ಮುಡಿಗೇರಿಸಿಕೊಂಡರು. ದಕ್ಷಿಣ ಆಫ್ರಿಯಾ ವಿರುದ್ಧ 11* ಗಳಿಸಿದರು. ಈ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಎಂಟು ವಿಕೆಟ್​ಗಳ ಗೆಲುವು ಸಾಧಿಸಿದೆ.

ಮಿಥಾಲಿ ರಾಜ್​ ಅವರು 1999ರ ಜೂನ್​ 26ರಂದು ಐರ್ಲೆಂಡ್​ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಅವರೀಗ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು 20 ವರ್ಷದ ಮೇಲೆ 105 ದಿನಗಳಾಗಿವೆ. ಏಕದಿನ ಪಂದ್ಯಾವಳಿಗಳನ್ನು 20 ವರ್ಷಗಳಿಂದ ಆಡುತ್ತಿರುವ ಮೊದಲ ಮಹಿಳಾ ಕ್ರಿಕೆಟರ್​ ಎಂಬ ಹೆಗ್ಗಳಿಕೆಯೂ ಮಿಥಾಲಿಯವರದ್ದಾಗಿದೆ.

ಮಹಿಳಾ ಕ್ರಿಕೆಟ್​ನಲ್ಲಿ ಅತಿಹೆಚ್ಚು ಏಕದಿನ ಪಂದ್ಯಗಳನ್ನು ಆಡುವ ಮೂಲಕ ಮಿಥಾಲಿ ದಾಖಲೆ ನಿರ್ಮಿಸಿದ್ದಾರೆ. ಈಗಿನವರೆಗೆ ಸುಮಾರು 204 ಒನ್​ ಡೇ ಮ್ಯಾಚ್​ಗಳನ್ನು ಆಡಿದ್ದಾರೆ. ಈವರು ಮೊದಲ ಸ್ಥಾನದಲ್ಲಿದ್ದು ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್​ನ ಎಡ್ವರ್ಸ್​ (191 ಪಂದ್ಯ), ಹಾಗೂ ಮೂರನೇ ಸ್ಥಾನದಲ್ಲಿ ಭಾರತದ ಮಾಜಿ ಕ್ಯಾಪ್ಟನ್​ ಆಗಿದ್ದ ಜೂಲನ್​ ಗೋಸ್ವಾಮಿ (178) ಇದ್ದಾರೆ.

ಮಿಥಾಲಿ ರಾಜ್​ ಅವರು 10 ಟೆಸ್ಟ್​ ಪಂದ್ಯಗಳನ್ನು, 89 ಟಿ-20 ಪಂದ್ಯಾವಳಿಗಳನ್ನೂ ಆಡಿದ್ದಾರೆ. ಕಳೆದ ತಿಂಗಳಷ್ಟೇ ಟಿ-20 ಕ್ರಿಕೆಟ್​ನಿಂದ ನಿವೃತ್ತಿ ಪಡೆದಿದ್ದು, ಹರ್ಮನ್ ಪ್ರೀತ್ ಕೌರ್ ನಾಯಕಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಕ್ರಿಕೆಟ್​ ದಂತಕತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಟೀಂ ಇಂಡಿಯಾ ಮಾಜಿ ಬ್ಯಾಟ್ಸ್​ಮೆನ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 22 ವರ್ಷ 91 ದಿನ ಆಡಿದ್ದಾರೆ. ಈಗ ಮಹಿಳಾ ಕ್ರಿಕೆಟ್​ನಲ್ಲಿ ಭಾರತ ತಂಡದ ಮಿಥಾಲಿ ರಾಜ್​ ಕೂಡ ದಾಖಲೆ ನಿರ್ಮಿಸಿದ್ದಾರೆ.

ಭಾರತ ಮಹಿಳೆಯರಿಗೆ ಶರಣಾದ ದಕ್ಷಿಣ ಆಫ್ರಿಕಾ

ಇಂದು ವಡೋದರಾದಲ್ಲಿ ಮೊದಲು ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ಭಾರತಕ್ಕೆ 164 ರನ್​ಗಳ ಗುರಿ ನೀಡಿತ್ತು. ನಂತರ ಬ್ಯಾಟ್​ ಮಾಡಿದ ಭಾರತ 2 ವಿಕೆಟ್​ಗಳ ನಷ್ಟಕ್ಕೆ 165 ರನ್​ ಗಳಿಸುವ ಮೂಲಕ ಗೆಲುವಿನ ನಗು ಬೀರಿತು.

Leave a Reply

Your email address will not be published. Required fields are marked *