ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ

ಧಾರವಾಡ: 2019ರ ಜ. 1ರಿಂದ ಹುಬ್ಬಳ್ಳಿ- ಧಾರವಾಡ ಅವಳಿನಗರದ ಎಲ್ಲ ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗುತ್ತಿದೆ. 2 ತಿಂಗಳ ಕಾಲಾವಕಾಶದಲ್ಲಿ ಎಲ್ಲ ಆಟೋಗಳು ಮೀಟರ್ ಅಳವಡಿಸಿಕೊಂಡು ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಸತ್ಯಾಪನೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ತಮ್ಮ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ರಸ್ತೆ ಸುರಕ್ಷತಾ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಆಟೋ ಪ್ರಯಾಣ ದರವು ಮೊದಲ 1.6 ಕಿ.ಮೀ. ಪ್ರಯಾಣಕ್ಕೆ ಕನಿಷ್ಠ 23 ರೂ. ಹಾಗೂ ನಂತರ ಪ್ರತಿ 1 ಕಿ.ಮೀ.ಗೆ 13 ರೂ. ಇದೆ. ಅದನ್ನು ಜ. 1ರಿಂದ ಮೊದಲ 1.6 ಕಿ.ಮೀ. ಪ್ರಯಾಣಕ್ಕೆ ಕನಿಷ್ಠ 28 ರೂ. ಹಾಗೂ ನಂತರ ಪ್ರತಿ 1 ಕಿ.ಮೀ. ಪ್ರಯಾಣಕ್ಕೆ 15 ರೂ.ಗೆ ಹೆಚ್ಚಿಸಲಾಗುವುದು ಎಂದರು.

ಜ. 1ರಿಂದ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗುತ್ತದೆ. ಅಲ್ಲಿಯವರೆಗೆ ಆಟೋಗಳಿಗೆ ರಹದಾರಿ ಪತ್ರ ನೀಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುವುದು. ಕಾನೂನು ಮಾಪನಶಾಸ್ತ್ರ ಇಲಾಖೆಯು ತೂಕ ಮತ್ತು ಅಳತೆ ಸಾಧನೆಗಳ ಹೊಸ ದುರಸ್ತಿ ಮಾರಾಟ ಮತ್ತು ಲೈಸೆನ್ಸ್​ದಾರರನ್ನು ಗುರುತಿಸಿ ಅರ್ಹರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ, ಮೀಟರ್​ಗಳನ್ನು ತ್ವರಿತವಾಗಿ ಸತ್ಯಾಪನೆ ಮಾಡಿಕೊಡಬೇಕು ಎಂದರು.

ದಾಖಲಾತಿಗಳನ್ನು ಹೊಂದದಿರುವ ಆಟೋಗಳ ತಪಾಸಣೆ ಕಾರ್ಯ ಚುರುಕುಗೊಳಿಸಬೇಕು. ಪೊಲೀಸ್ ಕಮೀಷನರೇಟ್​ನ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರ ಅಧ್ಯಕ್ಷತೆಯಲ್ಲಿ ಆಟೋ ರಿಕ್ಷಾ ಮಾಲೀಕರ ಮತ್ತು ಚಾಲಕರ ಸಭೆ ನಡೆಸಿ 3 ತಿಂಗಳ ಕಾಲಾವಕಾಶ ನೀಡಿ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಅ. 16ರಂದು ಕಾಲಾವಕಾಶ ಮುಕ್ತಾಯವಾಗಿದೆ. ಇದೀಗ ಅನಧಿಕೃತ ಆಟೋಗಳ ತಪಾಸಣಾ ಕಾರ್ಯ ಚುರುಕುಗೊಳಿಸಲಾಗುವುದು ಎಂದರು.

ರಸ್ತೆ ಅಪಘಾತಕ್ಕೆ ಒಳಗಾಗುವ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಸೌಲಭ್ಯಗಳು ಸಕಾಲದಲ್ಲಿ ಸಿಗಬೇಕು. ಆಂಬುಲೆನ್ಸ್ ಚಾಲಕರು ಮತ್ತು ಸಹಾಯಕರಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರುವ ವೈಜ್ಞಾನಿಕ ವಿಧಾನಗಳ ಕುರಿತು ತರಬೇತಿ ನೀಡಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚಿಸಿದರು. ಶಾಲಾ ಮಕ್ಕಳನ್ನು ಮಿತಿಗಿಂತ ಹೆಚ್ಚು ಸಂಖ್ಯೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಕರೆದೊಯ್ಯುವ ಆಟೋ ಮತ್ತು ಶಾಲಾ ವಾಹನಗಳನ್ನು ತಪಾಸಣೆ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಮಹಾನಗರ ಉಪ ಪೊಲೀಸ್ ಆಯುಕ್ತ ಬಿ.ಎಸ್. ನೇಮಗೌಡ, ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎ.ಎಸ್. ಪಾಣಿಶೆಟ್ಟರ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.