ಇಲ್ಲಿಗೆ ಮುಕ್ತಾಯವೆಂದು ಕ್ರಿಕೆಟ್​ಗೆ ವಿದಾಯ ಹೇಳಿದ ಆಸ್ಟ್ರೇಲಿಯಾದ ವೇಗಿ

ನವದೆಹಲಿ: ಟೀಂ ಆಸ್ಟ್ರೇಲಿಯಾ ಕಂಡ ಅದ್ಭುತ ಎಡಗೈ ಬೌಲರ್​ ಮಿಚೆಲ್​ ಜಾನ್ಸನ್​ ಅವರು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಭಾನುವಾರ ವಿದಾಯ ಘೋಷಿಸಿದ್ದಾರೆ.

ಇಲ್ಲಿಗೆ ಮುಕ್ತಾಯವಾಯಿತು. ನಾನಿಂದು ನನ್ನ ಕೊನೆಯ ಎಸೆತವನ್ನು ಎಸೆದಿದ್ದೇನೆ. ಕೊನೆಯ ವಿಕೆಟ್‌ನ್ನು ಪಡೆದಿದ್ದೇನೆ. ಇಂದು ನಾನು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುತ್ತಿದ್ದೇನೆ ಎಂದು ಸ್ಥಳೀಯ ಪತ್ರಿಕೆಯೊಂದಕ್ಕೆ ಜಾನ್ಸನ್​ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಮಧ್ಯ ವರ್ಷದ ವರೆಗೂ ವಿವಿಧ ಟಿ20 ಪಂದ್ಯಗಳಲ್ಲಿ ನಾನು ಮುಂದುವರಿಯುತ್ತೇನೆ. ಆದರೆ, ನನ್ನ ದೇಹ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂದು ಜಾನ್ಸನ್​ ತಿಳಿಸಿದ್ದಾರೆ.

ಮುಂದಿನ ವೃತ್ತಿ ಜೀವನದ ಬಗ್ಗೆ ಮಾತನಾಡಿರುವ ಜಾನ್ಸನ್​, ನನ್ನ ಸ್ಪರ್ಧಾತ್ಮಕ ಪ್ರಚೋದನೆಯನ್ನು ನಾನು ಇಲ್ಲಿಗೆ ನಿಲ್ಲಿಸುವುದಿಲ್ಲ. ಭವಿಷ್ಯದಲ್ಲಿ ತರಬೇತುದಾರನಾಗಿಯೋ ಅಥವಾ ಮಾರ್ಗದರ್ಶಕನ ಪಾತ್ರವನ್ನು ನಿಭಾಯಿಸುತ್ತೇನೆ. ನಿಮ್ಮ ಸಾಮರ್ಥ್ಯಕ್ಕೆ ಅಂಟಿಕೊಳ್ಳುವಲ್ಲಿ ನನಗೆ ನಂಬಿಕೆಯಿಲ್ಲ. ಕ್ರಿಕೆಟ್​ ನನ್ನ ಶಕ್ತಿ ಎಂದು ಹೇಳಿಕೊಂಡಿದ್ದಾರೆ.

36 ವರ್ಷದ ಎಡಗೈ ವೇಗಿ 153 ಏಕದಿನ ಪಂದ್ಯವನ್ನಾಡಿದ್ದು, 4.84 ಬೌಲಿಂಗ್​ ಸರಾಸರಿಯಲ್ಲಿ 239 ವಿಕೆಟ್​ ಕಬಳಿಸಿದ್ದಾರೆ. ಉಳಿದಂತೆ 73 ಟೆಸ್ಟ್​ ಪಂದ್ಯವನ್ನಾಡಿರುವ ಜಾನ್ಸನ್​ 3.33 ಸರಾಸರಿಯಲ್ಲಿ 313 ವಿಕೆಟ್​ ಅನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ. ಜಾನ್ಸನ್​ 2009ರಲ್ಲಿ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಎಂಬ ಕೀರ್ತಿಗೂ ಭಾಜನರಾಗಿದ್ದರು. (ಏಜೆನ್ಸೀಸ್​)