ಬಲಿಷ್ಠ ಭಾರತಕ್ಕೆ ಇಂದು ಕಿವೀಸ್ ಟೆಸ್ಟ್

ನಾಟಿಂಗ್​ಹ್ಯಾಂ: ವಿಶ್ವಕಪ್ ಟೂರ್ನಿಯ ಮೇಲೆ ಮಳೆ ತನ್ನ ನಿಯಂತ್ರಣ ಸಾಧಿಸುತ್ತಿರುವ ಹಂತದಲ್ಲಿ ಭಾರತ ತನ್ನ ಮೂರನೇ ಪಂದ್ಯದಲ್ಲಿ ಗುರುವಾರ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್​ಗೇರುವ ಹಾದಿಯಲ್ಲಿರುವ ನ್ಯೂಜಿಲೆಂಡ್​ಗೂ ಈ ಪಂದ್ಯ ಮುಖ್ಯವಾಗಿದೆ. ಅದಕ್ಕೆ ಕಾರಣ, ಹಿಂದಿನ 3 ಪಂದ್ಯಗಳಲ್ಲಿ ದುರ್ಬಲ ಎದುರಾಳಿಗಳ ವಿರುದ್ಧ ಆಡಿದ್ದ ಕೇನ್ ವಿಲಿಯಮ್ಸನ್ ಸಾರಥ್ಯದ ತಂಡ, ಈ ಪಂದ್ಯದ ಮೂಲಕ ಬಲಿಷ್ಠ ತಂಡಗಳ ಮುಖಾಮುಖಿಗೆ ಸಜ್ಜಾಗಬೇಕಾಗಿದೆ. ಟ್ರೆಂಟ್​ಬ್ರಿಜ್​ನಲ್ಲಿ ನಡೆಯಲಿರುವ ಪಂದ್ಯ ಕೂಡ ವಾಶೌಟ್ ಆಗುವ ಭೀತಿಯಲ್ಲಿಯೇ ನಡೆಯಲಿದೆ. ಮಳೆ ಅನುವು ಮಾಡಿಕೊಟ್ಟಲ್ಲಿ, ಎರಡು ಅಂಕಗಳಿಗಾಗಿ ವಿಶ್ವದ ಬಲಿಷ್ಠ ತಂಡಗಳ ಮುಖಾಮುಖಿ ಕುತೂಹಲ ಕೆರಳಿಸಲಿದೆ. ಅಭ್ಯಾಸ ಪಂದ್ಯದಲ್ಲಿ ಕಿವೀಸ್ ವಿರುದ್ಧ ಮುಗ್ಗರಿಸಿದ್ದ ಭಾರತ ತಂಡ, ಆ ಪಂದ್ಯದ ಸೋಲಿಗೆ ಪ್ರಧಾನ ಸುತ್ತಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ. ಬಹಳ ಮುಖ್ಯವಾಗಿ ಪಂದ್ಯಕ್ಕೂ ಮುನ್ನ ಭಾರತ ತಂಡ ದೊಡ್ಡ ಗಾಯದ ಸಮಸ್ಯೆ ಎದುರಿಸಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಗೆಲುವಿಗೆ ಕಾರಣರಾಗಿದ್ದ ಶಿಖರ್ ಧವನ್ ಹೆಬ್ಬೆರಳಿನ ಗಾಯಕ್ಕೆ ಒಳಗಾಗಿದ್ದು ಪಂದ್ಯಕ್ಕೆ ಲಭ್ಯರಿಲ್ಲ. ರೋಹಿತ್ ಶರ್ಮಗೆ ಜತೆಯಾಗಿ ಕೆಎಲ್ ರಾಹುಲ್ ಆರಂಭಿಕರಾಗಿ ಆಡಲಿದ್ದರೆ, ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಮತ್ತೆ ಮುಂದುವರಿಯಲಿದೆ. ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್​ರಲ್ಲಿ ಯಾರನ್ನು ಆಡಿಸಲಾಗುತ್ತದೆ ಎನ್ನುವ ಕುತೂಹಲವೂ ಇದೆ. ನ್ಯೂಜಿಲೆಂಡ್ ತಂಡ ಕೂಡ ಆರಂಭಿಕ ಆಟಗಾರ ಕಾಲಿನ್ ಮನ್ರೋರನ್ನು ಕೈಬಿಡುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದ ಮನ್ರೋ, ಬದಲಿಗೆ ಹೆನ್ರೊ ನಿಕೋಲ್ಸ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ನಾಟಿಂಗ್​ಹ್ಯಾಂ ಪಿಚ್ ರಿಪೋರ್ಟ್

ಗುರುವಾರ ಪೂರ್ಣ ದಿನ ನಾಟಿಂಗ್​ಹ್ಯಾಂನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದು ಪಂದ್ಯದ ಸಂಭ್ರಮ ವನ್ನು ಕಸಿದುಕೊಳ್ಳುವುದು ನಿಶ್ಚಿತ. ಸ್ಥಳೀಯ ಕಾಲಮಾನ ಸಂಜೆ 6 (ಭಾರತೀಯ ಕಾಲಮಾನ ರಾ. 10.30) ಬಳಿಕವಷ್ಟೇ ಮಳೆಯ ಪ್ರಮಾಣ ಕಡಿಮೆಯಾಗುವ ಸೂಚನೆ ಇದೆ. ಮುಂದಿನ 24 ಗಂಟೆಗಳಲ್ಲಿ ವಾತಾವರಣದಲ್ಲಿ ಬದಲಾವಣೆ ಆಗದೇ ಹೋದಲ್ಲಿ ಪಂದ್ಯ ವಾಶೌಟ್ ಆಗುವುದು ನಿಶ್ಚಿತ ಎನ್ನಲಾಗುತ್ತಿದೆ. ಮೋಡ ಕವಿದ ವಾತಾವರಣ ಇರುವ ಕಾರಣ ಪಂದ್ಯ ನಡೆದಲ್ಲಿ ವೇಗದ ಬೌಲರ್​ಗಳು ಲಾಭ ಪಡೆದುಕೊಳ್ಳಲಿದ್ದಾರೆ. ಟಾಸ್ ಗೆದ್ದ ತಂಡ ನಿಸ್ಸಂಶಯವಾಗಿ ಬೌಲಿಂಗ್ ಆಯ್ದುಕೊಳ್ಳಲಿದೆ.

ಫರ್ಗ್ಯುಸನ್-ಹೆನ್ರಿ ಜೋಡಿ

ಟಿಮ್ ಸೌಥಿ ಗಾಯದಿಂದಾಗಿ ಚೇತರಿಸಿಕೊಳ್ಳಲು ಕೆಲ ಸಮಯ ಹಿಡಿಯಲಿದ್ದರೆ, ಟ್ರೆಂಟ್ ಬೌಲ್ಟ್​ರ ಸ್ವಿಂಗ್ ಎಸೆತಗಳು ಜಾದೂ ಮಾಡಲು ವಿಫಲವಾಗಿದೆ. ಈ ಹಂತದಲ್ಲಿ ಕಿವೀಸ್​ನ ಬೌಲಿಂಗ್​ನ ಭಾರವನ್ನು ಮ್ಯಾಟ್ ಹೆನ್ರಿ ಹಾಗೂ ಲಾಕಿ ಫರ್ಗ್ಯುಸನ್ ಹೊತ್ತು ನಿಂತಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ತಮ್ಮ ನಡುವೆ 15 ವಿಕೆಟ್​ಗಳನ್ನು ಹಂಚಿಕೊಂಡಿರುವ ಈ ಜೋಡಿಗೆ ಆಲ್ರೌಂಡರ್​ಗಳಾದ ಜೇಮ್್ಸ ನೀಶಾಮ್ ಹಾಗೂ ಕಾಲಿನ್ ಡಿ ಗ್ರಾಂಡ್​ಹೋಮ್ ಉತ್ತಮ ಸಾಥ್ ನೀಡುತ್ತಿದ್ದಾರೆ. ‘ವೆಸ್ಟ್ ಇಂಡೀಸ್ ಈಗಾಗಲೇ ಟ್ರೆಂಟ್​ಬ್ರಿಜ್ ಮೈದಾನದಲ್ಲಿ ಹೆಚ್ಚಿನ ಬೌನ್ಸ್ ಇರಲಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಹಾಗಾಗಿ ಈ ಮೈದಾನದಲ್ಲಿ ಭಾರತವನ್ನು ಬೌನ್ಸರ್ ಎಸೆತಗಳ ಮೂಲಕವೇ ಕಟ್ಟಿಹಾಕುವ ವಿಶ್ವಾಸವಿದೆ’ ಎಂದು ಫರ್ಗ್ಯುಸನ್ ಹೇಳುವ ಮೂಲಕ ಭಾರತವನ್ನು ಎಚ್ಚರಿಸಿದ್ದಾರೆ.

ಇಂಗ್ಲೆಂಡ್​ಗೆ ಪ್ರಯಾಣಿಸಿದ ರಿಷಭ್​ ಪಂತ್​

ನವದೆಹಲಿ: ಗಾಯಗೊಂಡಿರುವ ಶಿಖರ್ ಧವನ್ ವಿಶ್ವಕಪ್​ನಿಂದ ಹೊರಬಿದ್ದಲ್ಲಿ ಬದಲಿ ಆಟಗಾರನಾಗಿ ರಿಷಭ್ ಪಂತ್ ಆಯ್ಕೆಯಾಗುವುದು ಖಚಿತವಾಗಿದೆ. ಈಗಾಗಲೇ ರಿಷಭ್ ಪಂತ್, ಧವನ್​ಗೆ ಮೀಸಲು ಆಟಗಾರರಾಗಿ ಇಂಗ್ಲೆಂಡ್​ಗೆ ಪ್ರಯಾಣಿಸಲಿದ್ದಾರೆ ವಿಶ್ವಕಪ್ ನಡೆಯುವ ವೇಳೆ ಪಂತ್, ಬಿಸಿಸಿಐನ ಖರ್ಚಿನಲ್ಲಿ ಅವರು ಟೀಮ್ ಜತೆ ಇರಲಿದ್ದಾರೆ. ಧವನ್​ರ ಚೇತರಿಕೆಗೆ ಎಷ್ಟು ದಿನಗಳು ಬೇಕಾಗಲಿವೆ ಎನ್ನುವ ಬಗ್ಗೆ ಟೀಮ್ ಮ್ಯಾನೇಜ್​ವೆುಂಟ್ ಸ್ಪಷ್ಟವಾಗಿ ತಿಳಿಸಿಲ್ಲ. ಮೂಲಗಳ ಪ್ರಕಾರ ಅವರು 4 ಪಂದ್ಯಗಳಿಗೆ ಲಭ್ಯರಿಲ್ಲ. ನ್ಯೂಜಿಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಆಡುವುದು ಅನುಮಾನ. ಇಷ್ಟು ಅವಧಿಯವರೆಗೂ ಅವರು ಚೇತರಿಸಿಕೊಳ್ಳದೇ ಇದ್ದ ಪಕ್ಷದಲ್ಲಿ ರಿಷಭ್ ಪಂತ್, ತಂಡಕ್ಕೆ ಅಧಿಕೃತವಾಗಿ ಸೇರಿಕೊಳ್ಳಲಿದ್ದಾರೆ. ವಿಶ್ವಕಪ್​ನ ಜೆರ್ಸಿ ಹಾಗೂ ಕಿಟ್​ಅನ್ನು ಈಗಾಗಲೇ ಬಿಸಿಸಿಐ ರಿಷಭ್ ಪಂತ್​ಗೆ ನೀಡಿದ್ದು, ಗುರುವಾರ ಮುಂಜಾನೆಯ ವಿಮಾನದಲ್ಲಿ ಇಂಗ್ಲೆಂಡ್ ವಿಮಾನ ಏರಲಿದ್ದಾರೆ.

57-  ವಿರಾಟ್ ಕೊಹ್ಲಿ ಇನ್ನು 57 ರನ್ ಬಾರಿಸಿದರೆ, ಏಕದಿನ ಕ್ರಿಕೆಟ್​ನಲ್ಲಿ 11 ಸಾವಿರ ರನ್ ಪೂರೈಸಲಿದ್ದಾರೆ. ತಮ್ಮ 222ನೇ ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡುವ ಮೂಲಕ ಅತಿವೇಗವಾಗಿ 11 ಸಾವಿರ ರನ್ ಬಾರಿಸಿದ ಆಟಗಾರ ಎನಿಸಲಿದ್ದಾರೆ. ಸದ್ಯ ಸಚಿನ್ ತೆಂಡುಲ್ಕರ್ 276 ಇನಿಂಗ್ಸ್ ಗಳಲ್ಲಿ 11 ಸಾವಿರ ರನ್ ಸಿಡಿಸಿದ್ದು ಅತಿವೇಗದ ದಾಖಲೆ ಎನಿಸಿದೆ.

ಭಾರತ

ಬಲ: ಬಲಿಷ್ಠ ಬ್ಯಾಟಿಂಗ್ ವಿಭಾಗ; ಬುಮ್ರಾ ಬೌಲಿಂಗ್; ಸತತ 2 ಗೆಲುವಿನ ವಿಶ್ವಾಸ;

ದೌರ್ಬಲ್ಯ: ಧವನ್ ಅಲಭ್ಯತೆ; ಕಿವೀಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಸೋಲು; ಮಧ್ಯಮ ಕ್ರಮಾಂಕದ ಬ್ಯಾಟಿಂಗ್.

ಟೀಮ್ ನ್ಯೂಸ್: ಬಹಳ ಮುಖ್ಯವಾಗಿ ಪಂದ್ಯಕ್ಕೂ ಮುನ್ನ ಭಾರತ ತಂಡ ದೊಡ್ಡ ಗಾಯದ ಸಮಸ್ಯೆ ಎದುರಿಸಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಗೆಲುವಿಗೆ ಕಾರಣರಾಗಿದ್ದ ಶಿಖರ್ ಧವನ್ ಹೆಬ್ಬೆರಳಿನ ಗಾಯಕ್ಕೆ ಒಳಗಾಗಿದ್ದು ಪಂದ್ಯಕ್ಕೆ ಲಭ್ಯರಿಲ್ಲ. ರೋಹಿತ್ ಶರ್ಮಗೆ ಜತೆಯಾಗಿ ಕೆಎಲ್ ರಾಹುಲ್ ಆರಂಭಿಕರಾಗಿ ಆಡಲಿದ್ದರೆ, ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಮತ್ತೆ ಮುಂದುವರಿಯಲಿದೆ. ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್​ರಲ್ಲಿ ಯಾರನ್ನು ಆಡಿಸಲಾಗುತ್ತದೆ ಎನ್ನುವ ಕುತೂಹಲವೂ ಇದೆ.

ಕಳೆದ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ 36 ರನ್ ಜಯ.

ನ್ಯೂಜಿಲೆಂಡ್

ಬಲ: ರಾಸ್ ಟೇಲರ್ ಬ್ಯಾಟಿಂಗ್; ಮ್ಯಾಟ್ ಹೆನ್ರಿ-ಫರ್ಗ್ಯುಸನ್ ಬೌಲಿಂಗ್; ಸತತ ಮೂರು ಗೆಲುವಿನ ವಿಶ್ವಾಸ;

ದೌರ್ಬಲ್ಯ: ಕುಲ್-ಚಾ ಜೋಡಿಯ ವಿರುದ್ಧ ವಿಲಿಯಮ್ಸನ್ ವೈಫಲ್ಯ; ಮಧ್ಯಮ ಕ್ರಮಾಂಕದ ಬ್ಯಾಟಿಂಗ್; ಬೌಲ್ಟ್​ರ ದುರ್ಬಲ ಬೌಲಿಂಗ್.

ಟೀಮ್ ನ್ಯೂಸ್: ನ್ಯೂಜಿಲೆಂಡ್ ತಂಡ ಕೂಡ ಆರಂಭಿಕ ಕಾಲಿನ್ ಮನ್ರೋರನ್ನು ಕೈಬಿಡುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದ ಮನ್ರೋ, ಬದಲಿಗೆ ಹೆನ್ರೊ ನಿಕೋಲ್ಸ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಕಳೆದ ಪಂದ್ಯ: ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್ ಗೆಲುವು

Leave a Reply

Your email address will not be published. Required fields are marked *