ಸುವರ್ಣ ತ್ರಿಭುಜ ಬೋಟ್ ಚಿತ್ರ ಬಿಡುಗಡೆ

ಕಾರವಾರ: ಮಹಾರಾಷ್ಟ್ರದ ಮಾಲ್ವಾಣ್ ಸಮೀಪ ಮುಳುಗಡೆಯಾದ ಮಲ್ಪೆಯ ‘ಸುವರ್ಣ ತ್ರಿಭುಜ’ ಆಳ ಸಮುದ್ರ ಮೀನುಗಾರಿಕೆ ಬೋಟ್‌ನ ಅವಶೇಷಗಳ ಚಿತ್ರಗಳನ್ನು ಭಾರತೀಯ ನೌಕಾಪಡೆ ಗುರುವಾರ ಬಿಡುಗಡೆ ಮಾಡಿದೆ. ನೀರಿನಾಳದಲ್ಲಿ ‘ತ್ರಿಭುಜ’ ಎಂದು ಇಂಗ್ಲಿಷ್‌ನಲ್ಲಿ ಬರೆದ ಅಕ್ಷರಗಳು ಮಸುಕಾಗಿ ಕಾಣುತ್ತಿವೆ.

ಐಎನ್‌ಎಸ್ ನಿರೀಕ್ಷಕ ನೌಕೆಯಲ್ಲಿ ತೆರಳಿದ್ದ ಉಡುಪಿ ಶಾಸಕ ರಘುಪತಿ ಭಟ್, ಮಲ್ಪೆಯ ತಾಂಡೇಲರ ಸಂಘದ ಸದಸ್ಯರು ಹಾಗೂ ನಾಪತ್ತೆಯಾದ ಬೋಟ್‌ನಲ್ಲಿದ್ದ ಮೀನುಗಾರರ ಕುಟುಂಬದವರು ನೌಕಾನೆಲೆ ಸಹಕಾರದಲ್ಲಿ ಮಾಲ್ವಾಣ್ ಸಮೀಪ ಆಳ ಸಮುದ್ರದಲ್ಲಿ ಬೋಟ್‌ನ ಅವಶೇಷಗಳನ್ನು ಮೇ 1ರಂದು ಪತ್ತೆ ಹಚ್ಚಿದ್ದರು. ನಂತರ ನೌಕಾನೆಲೆಯ ಮುಳುಗು ತಜ್ಞರು 64 ಮೀಟರ್ ಸಮುದ್ರದಾಳಕ್ಕೆ ಇಳಿದು ಬೋಟ್‌ನ ಅವಶೇಷಗಳ ಚಿತ್ರಗಳನ್ನು ತೆಗೆದುಕೊಂಡು ಬಂದಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದರು. ಆದರೆ, ಚಿತ್ರಗಳು ಲಭ್ಯವಾಗಿರಲಿಲ್ಲ. ಕದಂಬ ನೌಕಾನೆಲೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಯ ಕಪೂರ್ ಅವರು ಚಿತ್ರಗಳನ್ನು ಗುರುವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಆರೋಪಗಳಿಗೆ ಉತ್ತರವಿಲ್ಲ: ಐಎನ್‌ಎಸ್ ಕೊಚ್ಚಿ ಯುದ್ಧ ಹಡಗು ಡಿಕ್ಕಿ ಹೊಡೆದು ಸುವರ್ಣ ತ್ರಿಭುಜ ಬೋಟ್ ಮುಳುಗಿದೆ ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಆರೋಪಿಸಿದ್ದರು. ಆದರೆ, ನೌಕಾಸೇನೆ ಈ ಆರೋಪದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಬೋಟ್‌ನಲ್ಲಿದ್ದ ಮೀನುಗಾರರು ಏನಾದರು ಎಂಬ ಬಗ್ಗೆಯೂ ಇದುವರೆಗೂ ಸ್ಪಷ್ಟತೆ ಇಲ್ಲ.