ಮೇ 20ಕ್ಕೆ ಮತ್ತೊಮ್ಮೆ ನೀಟ್ ಪರೀಕ್ಷೆ

ಬೆಂಗಳೂರು: ನಾನಾ ಕಾರಣಗಳಿಂದ ಈ ಬಾರಿ ನೀಟ್ ಪರೀಕ್ಷೆಯಿಂದ ವಂಚಿತರಾಗಿದ್ದ 600 ವಿದ್ಯಾರ್ಥಿಗಳಿಗಾಗಿ ಮೇ 20ರಂದು ಮತ್ತೊಮ್ಮೆ ನೀಟ್ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್​ಆರ್​ಡಿ) ನಿರ್ಧರಿಸಿದೆ.

ಎಂಎಚ್​ಆರ್​ಡಿ ಸಚಿವ ಪ್ರಕಾಶ್ ಜಾವ್ಡೇಕರ್ ಸೋಮವಾರ ಟ್ವೀಟ್ ಮಾಡುವ ಮೂಲಕ ಮತ್ತೊಂದು ಅವಕಾಶ ನೀಡುವುದಾಗಿ ತಿಳಿಸಿದ್ದರು. ಮಂಗಳವಾರ ಪರೀಕ್ಷಾ ದಿನಾಂಕ ಪ್ರಕಟಿಸಿದ್ದಾರೆ.

ಹಂಪಿ ಎಕ್ಸ್​ಪ್ರೆಸ್ ವಿಳಂಬದಿಂದ ಮೇ 5ರಂದು ರಾಜ್ಯದಲ್ಲಿ ನಡೆದ ನೀಟ್​ಗೆ ದೂರದ ಜಿಲ್ಲೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲು ಹೊರಟಿದ್ದ ವಿದ್ಯಾರ್ಥಿಗಳು ಸೂಕ್ತ ಸಮಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಸುಮಾರು 600 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದರು. ರಾಜ್ಯದ ಜನಪ್ರತಿನಿಧಿಗಳು ಎಂಎಚ್​ಆರ್​ಡಿಗೆ ಪತ್ರ ಬರೆದು ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ಕೋರಿದ್ದರಿಂದ ಎಂಎಚ್​ಆರ್​ಡಿ ಪರೀಕ್ಷಾ ದಿನಾಂಕ ನಿಗದಿಪಡಿಸಿದೆ.

ಎರಡು ಮಾದರಿ ಪರೀಕ್ಷೆ: ನೀಟ್ ಪರೀಕ್ಷೆಯನ್ನು 2 ಹಂತದಲ್ಲಿ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್​ಟಿಎ)ಗೆ ಪತ್ರ ಬರೆದು ಮನವಿ ಮಾಡಿದೆ. ಸದ್ಯ ಕೌನ್ಸೆಲ್ ಆಫ್ ಆರ್ಕಿಟೆಕ್ಚರ್ ನಾಟ ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸುತ್ತಿದೆ. ಮೊದಲ ಹಂತದಲ್ಲಿ ಪರೀಕ್ಷೆ ಬರೆದವರು, ಬರೆಯದವರು ಎಲ್ಲರೂ ಎರಡನೇ ಪರೀಕ್ಷೆಗೆ ಹಾಜರಾಗಬಹುದು. ಯಾವ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬರಲಿದೆಯೋ ಅದನ್ನೇ ಅಂತಿಮವಾಗಿ ಪರಿಗಣಿಸಲಿದೆ. ಇದೇ ಮಾದರಿಯಲ್ಲಿ ನೀಟ್ ಪರೀಕ್ಷೆ 2 ಹಂತದಲ್ಲಿ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಎನ್​ಟಿಎಗೆ ಪತ್ರ ಬರೆದು ಕೋರಿದ್ದಾರೆ.