ಕನಸಾಗಿ ಉಳಿದ ನವೀಕರಣ ಕಾಮಗಾರಿ

ದೋರನಹಳ್ಳಿ: ನಾರಾಯಣಪುರ ಜಲಾಶಯದ ಎಸ್ಬಿಸಿ ವಿತರಣಾ ಕಾಲುವೆ 14ರ ಉಪ ಕಾಲುವೆ ಸಂಪೂರ್ಣ ಹಾಳಾಗಿದ್ದು, ಇದರಿಂದಾಗಿ ರೈತರ ಹೊಲಕ್ಕೆ ನೀರು ಬಾರದ ಕಾರಣ ರೈತರು ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ನವೀಕರಣಗೊಳ್ಳಬೇಕಾದ ಕಾಮಗಾರಿ ಇನ್ನೂ ಕನಸಾಗಿಯೇ ಉಳಿದಿದೆ.

14ರ ಉಪಕಾಲುವೆಗಳಾದ 1, 3, 5 ಸೇರಿ ಒಟ್ಟು 7 ಉಪ ಕಾಲುವೆ ಸಂಪೂರ್ಣವಾಗಿ ಹಾಳಾಗಿವೆ. ಜಲಾಶಯದಿಂದ ಬಿಟ್ಟ ನೀರು ಕಾಲುವೆಯಲ್ಲಿ ಹರಿಯದೇ ರೈತರ ಜಮೀನಿಗೆ ನುಗ್ಗಿ ಇದ್ದ ಬೆಳೆ ಕೂಡಾ ಹಾಳಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಈ ಕುರಿತು ಎಇಇ ರಾಜಶೇಖರ ಮಾಘಾ ಅವರಿಗೆ ಉಪ ಕಾಲುವೆ ದುರಸ್ಥಿ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ 2019ರ ಮುಂಗಾರು ಆರಂಭದ ವೇಳೆ ಈ ಎಲ್ಲ ಕಾಲುವೆಗಳನ್ನು ದುರಸ್ಥಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಭವಸೆ ಈಡೇರುವ ಯಾವ ಲಕ್ಷಣ ಕೂಡ ಇಲ್ಲಿ ಗೋಚರಿಸುತ್ತಿಲ್ಲ ಎಂದು ರೈತರು ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮೇಲೆ ನಿತ್ಯ ಹಿಡಿ ಶಾಪ ಹಾಕುತಿದ್ದಾರೆ.

ಸಧ್ಯ ಕಾಲುವೆಗಳ ದುಸ್ಥಿತಿ ಇನ್ನೂ ಹೇಳತೀರದಾಗಿದೆ ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾದ ಪರಸಿ, ತಗ್ಗು ಬಿದ್ದು ಹೋಗಿ ಮುಳ್ಳು ಕಂಟಿ ಬೆಳೆದುಕೊಂಡಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ದುಸ್ಥಿತಿಯಲ್ಲಿರುವ ಉಪ ಕಾಲುವೆ ನವೀಕರಣಕ್ಕೆ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ. 2015 ಮತ್ತು 16ರಲ್ಲಿ ಕಾಲುವೆಗಳ ನವೀಕರಣ ಕಾರ್ಯ ಆರಂಭವಾಗಿತ್ತಾದರೂ ಅದು ರೈತರ ಮೂಗಿಗೆ ತುಪ್ಪ ಸವರಿದಂತಾಗಿದೆ.

Leave a Reply

Your email address will not be published. Required fields are marked *