ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರ್ಷಾಚರಣೆಗೆ ಕೇಂದ್ರಬಿಂದುವಾಗಿದ್ದ ಎಂ.ಜಿ ರಸ್ತೆ, ಬ್ರಿಗ್ರೇಡ್ ರಸ್ತೆ, ಚರ್ಚ್ ಸ್ಟ್ರೀಟ್ನಲ್ಲಿ ಪ್ರತಿವರ್ಷದಂತೆ ಡಿ.31ರ ತಡ ರಾತ್ರಿ ಸಹ ಕಿಡಿಗೇಡಿಗಳ ಪುಂಡಾಟಿಕೆ ಹೆಚ್ಚಾಗಿಯೇ ಇತ್ತು.
ಎಂದಿನಂತೆ ಲಕ್ಷಾಂತರ ಮಂದಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ನಲ್ಲಿ ಜಮಾಯಿಸಿದ್ದರು. ಕೆಲವರು ಮದ್ಯದ ಅಮಲಿನಲ್ಲಿ ಇದ್ದರೆ ಇನ್ನೂ ಕೆಲವರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ಈ ನಡುವೆ ಕೆಲ ಕಿಡಿಗೇಡಿಗಳು ಯುವತಿಯರ ಜತೆಗೆ ಅಸಭ್ಯವಾಗಿ ವರ್ತಿಸಿರುವ ಅಹಿತಕರ ಘಟನೆಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಸಂಬಂಧ ಓರ್ವನನ್ನು ಅಶೋಕನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಮಧ್ಯರಾತ್ರಿ 12 ಗಂಟೆ ದಾಟುತ್ತಿದಂತೆ ಜನರ ನೂಕುನುಗ್ಗಲು ಉಂಟಾಯಿತು. ಎಂ.ಜಿ. ರಸ್ತೆಯ ಕಾವೇರಿ ಎಂಪೋರಿಯಂನಿಂದ ತಳ್ಳಾಟ ನೂಕಾಟ ವೇಳೆ ಕೆಲವರು ಬ್ರಿಗೇಡ್ ರಸ್ತೆಗೆ ತೆರಳಿ ಚರ್ಚ್ಸಿ್ಟ್ರಟ್ ಕಡೆ ಹೋದರೆ, ಇನ್ನು ಕೆಲವರು ಮೆಯೋಹಾಲ್ ಮೂಲಕ ಮತ್ತೆ ಕಾವೇರಿ ಎಂಪೋರಿಯಂಗೆ ಬಂದು ಕೂಗಾಡುತ್ತಿದ್ದರು.
ಅಹಿತಕರ ಘಟನೆಗಳು ನಡೆಯದಂತೆ ಸಾವಿರಾರು ಪೊಲೀಸರು ಎಚ್ಚರಿಕೆ ವಹಿಸಿದರೂ ಪುಂಡರು ಯವತಿಯರನ್ನು ಚುಡಾಯಿಸುವುದು, ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಬ್ರಿಗೇಡ್ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ತೃತೀಯ ಲಿಂಗಿಗಳು ಯುವಕರ ಮೇಲೆ ಹಲ್ಲೆ ನಡೆಸಿ ಪೊಲೀಸರ ಕಾಲಿಗೆ ಬಿದ್ದು ರಂಪಾಟ ನಡೆಸಿದರು.
ಒಪೆರಾ ಹೌಸ್ ಬಳಿ ಸ್ನೇಹಿತರ ಜತೆ ಬಂದಿದ್ದ ಯುವತಿಯ ಮೈಮುಟ್ಟಲು ಯತ್ನಿಸಿದ ಯುವಕನಿಗೆ ಸ್ಥಳದಲ್ಲಿದ್ದವರು ತರಾಟೆಗೆ ತೆಗೆದುಕೊಂಡರು. ಮತ್ತೊಂದೆಡೆ ಗೆಳೆಯನ ಜತೆಗಿದ್ದ ಯುವತಿ ಮುಟ್ಟಿದ್ದ ಯುವಕನಿಗೆ ಗೂಸಾ ಕೊಟ್ಟು ಪೊಲೀಸರಿಗೆ ಹಿಡಿದುಕೊಟ್ಟರು. ಕೋರಮಂಗಲ, ಇಂದಿರಾನಗರ, ಜೆ.ಪಿ. ನಗರ ಮುಂತಾದೆಡೆಯೂ ಸಾವಿರಾರು ಮಂದಿ ನೆರೆದಿದ್ದರು. ಆದರೆ, ಅಹಿತಕರ ಘಟನೆ ನಡೆದಿರುವ ಬಗ್ಗೆ ದೂರು ದಾಖಲಾಗಿಲ್ಲ.
426 ಕುಡಿತ ಪ್ರಕರಣ
ಬಿಎಂಟಿಸಿ, ಮೆಟ್ರೋ ಮತ್ತು ಕ್ಯಾಬ್ ಸೇವೆ ಇದ್ದರೂ ಮದ್ಯ ಸೇವಿಸಿ ವಾಹನ ಓಡಿಸುತ್ತಿದ್ದ ಚಾಲಕ/ಸವಾರರಿಗೆ ಟ್ರಾಫಿಕ್ ಪೊಲೀಸರು ನಶೆ ಬಿಡಿಸಿದರು. ಬುಧವಾರ ಬೆಳಗಿನ ಜಾವದವರೆಗೂ ಡ್ರಂಕ್ ಆಂಡ್ ಡ್ರೖೆವ್ ಸಂಬಂಧ 426 ಪ್ರಕರಣ ದಾಖಲಿಸಿದ್ದಾರೆ. ಪೂರ್ವ ವಿಭಾಗದಲ್ಲಿ 99, ಪಶ್ಚಿಮ ವಿಭಾಗ-254, ಉತ್ತರ ವಿಭಾಗದಲ್ಲಿ 73 ಪ್ರಕರಣ ಸೇರಿ 426 ಡಿಡಿ ಕೇಸ್ ದಾಖಲಾಗಿದೆ. ಎಲ್ಲ ವಾಹನ, ಡಿಎಲ್ ಜಪ್ತಿ ಮಾಡಿದ್ದು, ಕೋರ್ಟ್ನಲ್ಲಿ ದಂಡ ಪಾವತಿಸಿ ಬಿಡಿಸಿಕೊಳ್ಳಬೇಕಿದೆ.
ನೂಕಾಟದಲ್ಲಿ ಯುವಕನಿಗೆ ಗಾಯ
ನೂಕಾಟ ತಳ್ಳಾಟದಲ್ಲಿ ಕೆಳಗೆ ಬಿದ್ದ ಯುವಕ ಕಾಲ್ತುಳಿತಕ್ಕೆ ಒಳಗಾದ. ಮುಖಕ್ಕೆ ಗಾಯವಾಗಿದ್ದ ಯುವಕನನ್ನು ಪೊಲೀಸರು ರಕ್ಷಣೆ ಮಾಡಿ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳುಹಿಸಿದರು. ಕೋರಮಂಗಲದಲ್ಲಿ ಯುವತಿಗೆ ಕಿಡಿಗೇಡಿಗಳು ಕಿರುಕುಳ ಕೊಟ್ಟಿರುವ ಬಗ್ಗೆ ವರದಿ ಆಗಿದೆ.
ಕುಡುಕನಿಗೆ ಡಿಸಿಪಿ ಗೂಸಾ
ಮದ್ಯದ ನಶೆಯಲ್ಲಿ ಕನ್ನಡ ಧ್ವಜ ಹಿಡಿದು ಕೂಗುತ್ತಿದ್ದ ಯುವಕನಿಗೆ ಸಿಸಿಬಿ ಡಿಸಿಪಿ ರವಿಕುಮಾರ್ ಲಾಠಿ ರುಚಿ ತೋರಿಸಿದರು. ಸುಖಸುಮ್ಮನೆ ಗದ್ದಲ ಮಾಡಬೇಡ ಎಂದು ಬೈದು ಕಳುಹಿಸಿದರು.
ಪರ್ಯಾಯ ವ್ಯವಸ್ಥೆ ಸೂಕ್ತ
ಬೆಂಗಳೂರು: ಬ್ರಿಗೇಡ್ ರಸ್ತೆ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ಬಿಟ್ಟು ಪರ್ಯಾಯ ಸ್ಥಳದಲ್ಲಿ ಹೊಸ ವರ್ಷ ಆಚರಣೆಗೆ ಅವಕಾಶ ಮಾಡಿಕೊಡುವುದು ಹೆಚ್ಚು ಸೂಕ್ತ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ರ್ಚಚಿಸುವುದಾಗಿ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೆಲವು ಕಡೆ ಅಹಿತಕರ ಘಟನೆ ನಡೆದಿವೆ. ಕೆಲ ಪಾನಮತ್ತ ಕಿಡಿ ಗೇಡಿಗಳ ವರ್ತನೆಯಿಂದ ಹಲ ವರಿಗೆ ಮುಜುಗರ ಉಂಟಾಗಿದೆ ಎಂದು ಬುಧವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನವನಾಗಿ ನನಗೂ ಬದಲಾವಣೆ ತರ ಬೇಕು. ಇಂಥ ಮುಜುಗರಗಳನ್ನು ತಪ್ಪಿಸಬೇಕು ಎಂಬ ಆಸೆ ಇದೆ. ಈ ಬಗ್ಗೆ ಸಿಎಂ ಹಾಗೂ ಅಧಿಕಾರಿಗಳು ಜತೆ ರ್ಚಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೆಲವು ಘಟನೆಗಳನ್ನು ಹೊರತುಪಡಿಸಿದರೆ, ಎಲ್ಲೆಡೆ ಶಾಂತಿಯುತವಾಗಿ ಹೊಸ ವರ್ಷ ಆಚರಣೆ ನಡೆದಿದೆ ಎಂದ ಅವರು, ಶಾಂತಿ ಕಾಪಾಡಲು ಸಹಕರಿಸಿದ ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಅನುಚಿತ ವರ್ತನೆ ತೋರಿದವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲೆಲ್ಲಿ ಈ ರೀತಿ ಆಗಿದೆ ಎಂಬ ಬಗ್ಗೆ ವರದಿ ತರಿಸಿಕೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
| ವಿ.ಸೋಮಣ್ಣ ವಸತಿ ಹಾಗೂ ತೋಟಗಾರಿಕೆ ಸಚಿವ
ಕಿಡಿಗೇಡಿಗಳ ಬಂಧನಕ್ಕೆ ಕ್ರಮ
ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ ತೋರಿದ ಕಿಡಿಗೇಡಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದ್ದಾರೆ. ಎಂ.ಜಿ. ರಸ್ತೆ ಯಲ್ಲಿ ಕೆಲ ಯುವಕರು ಮಹಿಳೆಯರಿಗೆ ಕಿರುಕುಳ ಕೊಟ್ಟಿದ್ದಾರೆ. ಮುಂದಿನ ವರ್ಷ ಎಲ್ಲಿ ಆಚರಣೆ ಮಾಡಬೇಕು ಎನ್ನುವ ಬಗ್ಗೆ ರ್ಚಚಿಸುತ್ತೇವೆ. ಅರಮನೆ ಮೈದಾನದಲ್ಲಾದರೆ ದೊಡ್ಡ ಪ್ರಮಾಣದಲ್ಲಿ ಆಚರಣೆ ನಡೆಸಬಹುದು ಎಂದರು.
-ಠಿ;75 ಕೋಟಿ ಮದ್ಯ ಮಾರಾಟ
ಡಿ.31ರ ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆಗೆ ನಗರದಲ್ಲಿ 75 ಕೋಟಿ ರೂ.ಗೂ ಅಧಿಕ ಮೊತ್ತದ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಡಿ.31ರ ತಡರಾತ್ರಿ 2 ಗಂಟೆವರೆಗೂ ಬಾರ್ ಮತ್ತು ಪಬ್ ತೆರೆಯಲು ಅವಕಾಶ ನೀಡಲಾಗಿತ್ತು.