18 ಬುಲೆಟ್​ಗಳು ದೇಹವನ್ನು ಹೊಕ್ಕಿದ್ದರೂ ಅಚ್ಚರಿಯ ರೀತಿಯಲ್ಲಿ ಬದುಕುಳಿದ ವ್ಯಕ್ತಿ!

ಪಟನಾ: ಆಶ್ಚರ್ಯಕರ ಘಟನೆಯೊಂದರಲ್ಲಿ ಸುದೀರ್ಘ ಏಳು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ 18 ಬುಲೆಟ್​ ಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬ ಬದುಕುಳಿದಿದ್ದಾನೆ.

ಅಚ್ಚರಿಯ ರೀತಿಯಲ್ಲಿ ಬದುಕುಳಿದವನನ್ನು ಪಂಕಜ್​ ಕುಮಾರ್​​ ಸಿಂಗ್​(26) ಎಂದು ಗುರುತಿಸಲಾಗಿದೆ. ಈತ ಶನಿವಾರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬನಿಂದ ಗುಂಡಿನ ದಾಳಿಗೆ ಒಳಗಾಗಿದ್ದ. ಸೀತಾಮರ್ಹಿ ಸುಪ್ಪಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಜ್​ಪುರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು ಎಂದು ಪೊಲೀಸ್​ ವರಿಷ್ಠಾಧಿಕಾರಿ ಮಾಹಿತಿ ಖಚಿತ ಪಡಿಸಿದ್ದಾರೆ.

ಗುಂಡಿನ ದಾಳಿಯ ವೇಳೆ ದಾಳಿಕೋರನಿಂದ ಹೇಗೋ ತಪ್ಪಿಸಿಕೊಂಡು ಹತ್ತಿರದ ಆಸ್ಪತ್ರೆ​ಗೆ ಪಂಕಜ್​ ದಾಖಲಾಗಿದ್ದ. ಸಂತ್ರಸ್ತ ಪಂಕಜ್​ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಪಂಕಜ್​ನನ್ನು ಆಸ್ಪತ್ರೆಗೆ ಕರೆತಂದಾಗ ಆತನ ಎದೆ, ಕಾಲುಗಳು, ಕೈಗಳು, ಹೊಟ್ಟೆ, ಕಿಡ್ನಿ, ಗುಲ್ಮ ಹಾಗೂ ಲಿವರ್​ ಭಾಗದಲ್ಲಿ ಗುಂಡುಗಳಿತ್ತು. ಆತನ ನಾಡಿ ಮಿಡಿತವು ಕೂಡ ನಿಲ್ಲುವ ಹಂತದಲ್ಲಿತ್ತು. ಶ್ವಾಸಕೋಶದಿಂದ ರಕ್ತಸ್ರಾವ ಆಗುತ್ತಿತ್ತು ಎಂದು ವೈದ್ಯ ವರುಣ್​ ಕುಮಾರ್​ ಮಾಹಿತಿ ನೀಡಿದ್ದಾರೆ.

ಪಂಕಜ್​ಗೆ ಸೀತಾಮರ್ಹಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜನತಾ ದಳ ಟಿಕೆಟ್​ ನೀಡುವುದಾಗಿ ಹೇಳಿತ್ತು. ಆದರೆ, ಯಾವುದೇ ತಯಾರಿ ಮಾಡಿಕೊಳ್ಳದಿದ್ದರ ಕಾರಣದಿಂದಾಗಿ ಆತ ತನ್ನ ಅಭ್ಯರ್ಥಿ ಸ್ಥಾನವನ್ನು ಕೈಬಿಟ್ಟಿದ್ದ ಎಂದು ಹೇಳಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *