ಮೀರಾಬಾಯಿಗೆ ಸ್ವರ್ಣ ಪದಕ

ಅಪಿಯಾ (ಸಮೊವಾ): ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಕಾಮನ್ವೆಲ್ತ್ ವೇಟ್​ಲಿಫ್ಟಿಂಗ್ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಕೂಟದ ಮೊದಲ ದಿನವಾದ ಮಂಗಳವಾರ ಸೀನಿಯರ್, ಜೂನಿಯರ್ ಹಾಗೂ ಯೂತ್ ವಿಭಾಗಗಳಿಂದ 8 ಸ್ವರ್ಣ, 3 ಬೆಳ್ಳಿ ಹಾಗೂ 2 ಕಂಚು ಸೇರಿ 13 ಪದಕಗಳು ಭಾರತದ ಪಾಲಾದವು. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ 191 ಕೆಜಿ (84ಕೆಜಿ+107ಕೆಜಿ) ಭಾರ ಎತ್ತುವ ಮೂಲಕ ಸ್ವರ್ಣ ಪದಕ ದಕ್ಕಿಸಿಕೊಂಡರು. ಇದು ಒಲಿಂಪಿಕ್​ನ ಅರ್ಹತಾ ವಿಭಾಗವಾಗಿದ್ದು, 2020ರ ಟೋಕಿಯೋ ಒಲಿಂಪಿಕ್ಸ್​ಗೆ ಫೈನಲ್ ರ್ಯಾಂಕಿಂಗ್​ಗೆ ಮಾನದಂಡವಾಗಿದೆ. ಕಳೆದ ಏಪ್ರಿಲ್​ನಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಮೀರಾಬಾಯಿ 199ಕೆಜಿ ಭಾರ ಎತ್ತಿದ್ದರು. 18 ತಿಂಗಳ ಅವಧಿಯಲ್ಲಿ 6 ಕೂಟಗಳಲ್ಲಿ ತೋರುವ ಪ್ರದರ್ಶನದ ಆಧಾರದ ಮೇಲೆ ಒಲಿಂಪಿಕ್ಸ್​ಗೆ ಅರ್ಹತೆ ನೀಡಲಾಗುತ್ತದೆ. ಜಿಲ್ಲಿ ದಲಾಬೆಹ್ರಾ ಮಹಿಳೆಯರ 45 ಕೆಜಿ ವಿಭಾಗದಲ್ಲಿ 154 ಕೆಜಿ ಭಾರ ಎತ್ತುವ ಮೂಲಕ ಸ್ವರ್ಣ ಗೆದ್ದರು. ಸೀನಿಯರ್ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಬಿಂದ್ಯಾರಾಣಿ ದೇವಿ ಹಾಗೂ ಸಂತೋಷಿ ಕ್ರಮವಾಗಿ ಸ್ವರ್ಣ ಹಾಗೂ ಬೆಳ್ಳಿ ಜಯಿಸಿದರು. ಪುರುಷರ ವಿಭಾಗದಲ್ಲಿ ರಿಶಿಕಾಂತ್ ಸಿಂಗ್ 55 ಕೆಜಿ ವಿಭಾಗದಲ್ಲಿ 235ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಬೇಟೆಯಾಡಿದರು.

Leave a Reply

Your email address will not be published. Required fields are marked *