ಶಿವರಾಜ ಎಂ. ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೀನುಗಾರರಿಗೆ ಜಿಲ್ಲಾ ಮೀನುಗಾರಿಕೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಇದೇ ಮೊದಲ ಬಾರಿಗೆ ಮೀನುಗಾರಿಕೆಯಲ್ಲಿ ತೊಡಗಿರುವವರಿಗೂ ವಿಶೇಷ ಸಾಲಸೌಲಭ್ಯ ಒದಗಿಸಲು ‘ಕಿಸಾನ್ ಕ್ರೆಡಿಟ್ ಕಾರ್ಡ್’ ಕಲ್ಪಿಸಲು ಮುಂದಾಗಿದೆ.
ಕೃಷಿ ಚಟುವಟಿಕೆಗಳಿಗಷ್ಟೇ ಯೋಜನೆ ಮೀಸಲಾಗಿತ್ತು. ಅದನ್ನೀಗ ಮೀನುಗಾರಿಕೆಗೂ ವಿಸ್ತರಿಸಲಾಗಿದೆ. ಈಗಾಗಲೇ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ತಾಲೂಕುಗಳ ಸಹಾಯಕ ನಿರ್ದೇಶಕರಿಗೆ ಮಾಹಿತಿ ರವಾನಿಸಿದ್ದು, ಮೀನುಗಾರರನ್ನು ಗುರುತಿಸಿ ಸರ್ಕಾರದ ಯೋಜನೆ ತಲುಪಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ.
ಗರಿಷ್ಠ 3 ಲಕ್ಷ ಸಾಲ: ಜಿಲ್ಲೆಯಲ್ಲಿ ಮೀನುಗಾರಿಕೆ ಉದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಈ ಯೋಜನೆ ವರದಾನವಾಗಿದ್ದು, ಈ ವೃತ್ತಿಯಲ್ಲಿರುವವರಿಗೆ ಗರಿಷ್ಠ 3 ಲಕ್ಷ ರೂ.ವರೆಗೆ ಸಾಲಸೌಲಭ್ಯ ದೊರೆಯಲಿದೆ. ಪ್ರಾಥಮಿಕ ಹಂತವಾಗಿ 50ರಿಂದ 1 ಲಕ್ಷ ರೂಪಾಯಿ ಸಾಲ ನೀಡಲು ಇಲಾಖೆ ಚಿಂತಿಸಿದೆ. ಸುಮಾರು 1 ಎಕರೆ ಸ್ವಂತ ಜಮೀನಿನಲ್ಲಿ ಮತ್ಸ್ಯೋದ್ಯಮ ನಡೆಸುವವರಿಗೆ ಗರಿಷ್ಠ 2 ಲಕ್ಷ ರೂ. ಸಾಲ ನೀಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೀನುಗಾರರಿಗೆ ಮಾತ್ರ: ಮೀನು ಸಾಕಣೆ, ಮಾರಾಟ ಸೇರಿ ಮೀನುಗಾರಿಕೆಗೆ ಸಂಬಂಧಪಟ್ಟ ಯಾವುದೇ ವೃತ್ತಿಯಲ್ಲಿ ತೊಡಗಿದವರಿಗೂ ಈ ಯೋಜನೆ ಅನ್ವಯವಾಗುತ್ತದೆ. ಈಗಾಗಲೇ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆಸಕ್ತ ಮೀನುಗಾರರು ರಾಷ್ಟ್ರೀಕೃತ ಬ್ಯಾಂಕ್ ಅಥವಾ ಮೀನುಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್.ಆರ್.ನಾಗರಾಜು ತಿಳಿಸಿದ್ದಾರೆ.
ಪ್ರೋತ್ಸಾಹಧನವೂ ಲಭ್ಯ: ಮೀನುಗಾರಿಕೆಯಲ್ಲಿ ತೊಡಗಿರುವವರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲಸೌಲಭ್ಯ ಪಡೆದು ಅದನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದರೆ ಪ್ರೋತ್ಸಾಹಧನ (ಸಬ್ಸಿಡಿ)ವೂ ದೊರಕಲಿದೆ. ಕಡಿಮೆ ಬಡ್ಡಿ ದರದಲ್ಲಿ ಈ ಯೋಜನೆಯ ಲಾನುಭವಿಗಳಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
170 ಅರ್ಜಿ ಸಲ್ಲಿಕೆ: ಪ್ರಸ್ತುತ ಜಿಲ್ಲೆಯಲ್ಲಿ 500 ಮೀನುಗಾರರನ್ನು ಗುರುತಿಸಲಾಗಿದೆ. ಈಗಾಗಲೇ ಈ ಯೋಜನೆಯಡಿ 170 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇಲಾಖೆ ಸೂಚಿಸಿದ ಸಮರ್ಪಕ ದಾಖಲೆಗಳಿದ್ದರೆ ಸೌಲಸೌಲಭ್ಯಕ್ಕೆ ಅರ್ಹರೆಂದು ಶಿಾರಸು ಮಾಡಲಾಗುವುದು. ಆಸಕ್ತರು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರಬೇಕು. ಆಧಾರ್‌ಕಾರ್ಡ್, ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ದಾಖಲೆ ನೀಡಬೇಕು. ಭೂಮಿ ಇದ್ದರೆ ಅದರ ಪಹಣಿ ಬೇಕು. ಪಾಲು ಮೀನುಗಾರಿಕೆಗೂ ಅವಕಾಶವಿದೆ. ಮೀನುಸಾಕಣೆ, ಮೀನು ಹಿಡಿಯುವವರು ಹಾಗೂ ಮಾರಾಟಗಾರರಿಗೂ ಯೋಜನೆ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀನುಗಾರಿಕೆ ಉತ್ತೇಜಿಸುವ ಸಲುವಾಗಿ ಕೇಂದ್ರ ಜಾರಿಗೊಳಿಸಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಅರ್ಹ ಲಾನುಭವಿಗಳಿಗೆ ತಲುಪಿಸಲು ಕ್ರಮಕೈಗೊಳ್ಳಲಾಗಿದೆ. ಮೀನುಗಾರರಿಂದಲೂ ಸ್ಪಂದನೆ ವ್ಯಕ್ತವಾಗಿದೆ.
ಎಸ್.ಆರ್.ನಾಗರಾಜ್, ಹಿರಿಯ ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆ, ಬೆಂ.ಗ್ರಾಮಾಂತರಕೃಷಿಕರ ಬೆಳೆ ಸಾಲದಂತೆ ಮೀನುಗಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅನ್ವಯವಾಗಲಿದೆ. ಅರ್ಹರನ್ನು ಆಯ್ಕೆ ಮಾಡಿ ಯೋಜನೆಗೆ ಒಳಪಡಿಸಲು ಸಿದ್ಧತೆ ನಡೆಯುತ್ತಿದೆ.
ಎನ್.ಸುಬ್ರಹ್ಮಣ್ಯ, ಮೀನುಗಾರಿಕೆ ಸಹಾಯಕ ನಿರ್ದೇಶಕ