ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ: ಪೊಲೀಸ್ ವಶದಿಂದ ಆರೋಪಿ ಪರಾರಿ

ಉಡುಪಿ: ಮಣಿಪಾಲ ಶಿವಳ್ಳಿ ಗ್ರಾಮದ ಸಗ್ರಿಯ ಹಾಡಿ ಸಮೀಪ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಮಣಿಪಾಲ ಪೊಲೀಸರು ಬಂಧಿಸಿದ ಆರೋಪಿ ಹನುಮಂತ ಬಸಪ್ಪ ಕಂಬಳಿ(39) ಎಂಬಾತ ಜೈಲಿಗೆ ಕರೆದೊಯ್ಯುವ ಸಂದರ್ಭ ಪರಾರಿಯಾಗಿದ್ದಾನೆ.

ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ನಿವಾಸಿ, ಪ್ರಸ್ತುತ ಕಾಪು ಮಲ್ಲಾರಿನಲ್ಲಿ ವಾಸವಿದ್ದ ಹನುಮಂತ ಬಸಪ್ಪ ಕಂಬಳಿ ಎಂಬಾತನನ್ನು ಪೊಲೀಸರು ಸಾಯಂಕಾಲ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದರು. ಮಣಿಪಾಲ ಹೊಯ್ಸಳ ಪೊಲೀಸ್ ಜೀಪ್‌ನಲ್ಲಿ ಹಿರಿಯಡಕ ಅಂಜಾರಿನಲ್ಲಿರುವ ಜೈಲಿಗೆ ಆರೋಪಿಯನ್ನು ಕರೆದೊಯ್ಯುವಾಗ ಜೈಲಿನ ಸಮೀಪ ಆರೋಪಿ ಹನುಮಂತ ಪರಾರಿಯಾಗಿದ್ದಾನೆ. ತಪ್ಪಿಸಿಕೊಂಡ ಆರೋಪಿಗಾಗಿ ಪೊಲೀಸರು ಮತ್ತೆ ಶೋಧ ಆರಂಭಿಸಿದ್ದಾರೆ.

ಪ್ರಕರಣದ ವಿವರ: ನಿಟ್ಟೂರಿನಲ್ಲಿ ವಾಸವಿರುವ ವಲಸೆ ಕಾರ್ಮಿಕ ಕುಟುಂಬದ ಬಾಲಕಿ ಉಡುಪಿಯ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಆರೋಪಿ ಹನುಮಂತನಿಗೆ ಮಾರ್ಚ್ ಮೊದಲ ವಾರ ಬಾಲಕಿಯ ಪರಿಚಯವಾಗಿತ್ತು. ಆಕೆಗೆ ಹೆಚ್ಚಿನ ವೇತನದ ಕೆಲಸ ಕೊಡಿಸುವುದಾಗಿ ನಂಬಿಸಿದ ಹನುಮಂತ ಮೂಡುಸಗ್ರಿಯ ರೈಲು ಹಳಿ ಸಮೀಪದ ನಿರ್ಜನ ಪ್ರದೇಶವಾದ ಹಾಡಿಗೆ ಕರೆದೊಯ್ದಿದ್ದಾನೆ. ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು, ಆಕೆ ಮನೆಯವರಿಗೆ, ಪೊಲೀಸರಿಗೆ ವಿಷಯ ತಿಳಿಸುವುದಾಗಿ ಕಿರುಚಾಡಿದಾಗ ಗಾಬರಿಗೊಂಡ ಆರೋಪಿ ಬಾಲಕಿಯ ಕುತ್ತಿಗೆಗೆ ಚೂಡಿದಾರದ ವೇಲನ್ನು ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಸಿಸಿಟಿವಿಯೊಂದೇ ಆಧಾರ: ಬಾಲಕಿ ಮಾ.9ರಂದು ನಾಪತ್ತೆಯಾಗಿದ್ದು, ಮಾ.10ರಂದು ಕತ್ತು ಹಿಸುಕಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಸುಳಿವು ಪೊಲೀಸರಿಗೆ ಲಭ್ಯವಾಗಿರಲಿಲ್ಲ. ಆರೋಪಿಯನ್ನು ಬಂಧಿಸುವುದು ಸವಾಲಿನ ಸಂಗತಿಯಾಗಿತ್ತು. ಬಾಲಕಿ ಕೆಲಸ ಮಾಡುತ್ತಿದ್ದ ಅಂಗಡಿ ಪರಿಸರದ ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರು. ಕಪ್ಪು ಬಣ್ಣದ ವ್ಯಕ್ತಿಯೊಬ್ಬ ಬಾಲಕಿ ಜತೆ ಕೆಲ ನಿಮಿಷ ಮಾತನಾಡಿ, ಆಕೆಯನ್ನು ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿತ್ತು.

ಸವಾಲಿನ ಪ್ರಕರಣ ಬೇಧಿಸಿದ್ದ ತಂಡ: ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 3 ತಂಡಗಳನ್ನು ರಚಿಸಿದ್ದರು. ಸಿ.ಸಿ ಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದ ವ್ಯಕ್ತಿಯ ಮುಖಛಾಯೆ ಆಧಾರದ ಮೇಲೆ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರ ತಂಡ 20 ದಿನಗಳ ಕಾಲ ಶ್ರಮಿಸಿ ಉಡುಪಿ ಸಿಟಿ ಬಸ್‌ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಣಿಪಾಲ ವೃತ್ತ ನಿರೀಕ್ಷಕ ಟಿ.ಸುನಿಲ್ ಕುಮಾರ್, ಮಣಿಪಾಲ ಠಾಣೆ ಎಸ್‌ಐ ಶ್ರೀಧರ ಎಂ.ಪಿ, ಪ್ರೊಬೇಷನರಿ ಪಿಎಸ್‌ಐ ನಿರಂಜನ್ ಗೌಡ, ಸಿಬ್ಬಂದಿ ಮತ್ತು ಡಿಸಿಐಬಿ ಪೊಲೀಸ್ ನಿರೀಕ್ಷಕ ಸಿ.ಕಿರಣ್ ಮತ್ತು ಸಿಬ್ಬಂದಿ, ಸೆನ್‌ಠಾಣೆ ನಿರೀಕ್ಷಕ ಸೀತಾರಾಮ್ ಮತ್ತು ಸಿಬ್ಬಂದಿ ಸಹಕರಿಸಿದ್ದರು.

ಆರೋಪಿಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಎದುರು ಹಾಜರುಪಡಿಸಿ ಹಿರಿಯಡಕ ಅಂಜಾರಿನಲ್ಲಿರುವ ಜೈಲಿಗೆ ಕರೆದೊಯ್ಯುವಾಗ ಪರಾರಿಯಾಗಿದ್ದಾನೆ. ಆತನ ಶೋಧಕ್ಕೆ ಕಾರ್ಯಾಚರಣೆ ನಡೆಯುತ್ತಿದೆ. ಸಾರ್ವಜನಿಕರಿಗೆ ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂಗೆ ಮಾಹಿತಿ ನೀಡಬಹುದು.
|ನಿಶಾ ಜೇಮ್ಸ್, ಎಸ್ಪಿ, ಉಡುಪಿ