ಮೀನುಗಾರಿಕೆಗೆ ಮೂವರು ಸಚಿವರು

ವೇಣುವಿನೋದ್ ಕೆ.ಎಸ್. ಮಂಗಳೂರು
ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ರಚಿಸಲಾಗುವುದೆಂದು ಮಧ್ಯಂತರ ಬಜೆಟ್‌ನಲ್ಲಿ ಪ್ರಕಟಿಸಿದ್ದಕ್ಕೆ ಬದ್ಧವಾಗಿರುವ ಕೇಂದ್ರ ಸರ್ಕಾರ ಪ್ರತ್ಯೇಕ ಸಚಿವರನ್ನು ಘೋಷಿಸಿರುವುದು ಕರಾವಳಿಯ ಮೀನುಗಾರ ಸಮುದಾಯಕ್ಕೆ ಖುಷಿ ತಂದಿದೆ. ಈ ಮೂಲಕ ಕರಾವಳಿಯ ಮೀನುಗಾರರ ಹಲವು ದಶಕಗಳ ಹೋರಾಟಕ್ಕೆ ಫಲ ಸಿಕ್ಕಿದಂತಾಗಿದೆ.

ಇದುವರೆಗೆ ಕೃಷಿ ಸಚಿವಾಲಯದ ಅಧೀನದಲ್ಲಿದ್ದ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಈ ಮೂರನ್ನೂ ಈಗ ಪ್ರತ್ಯೇಕಿಸಿ ಹೊಸ ಸಚಿವಾಲಯ ಪ್ರಾರಂಭಿಸಲಾಗಿದೆ.
ಕೃಷಿ ಸಚಿವಾಲಯ ಎನ್ನುವುದೊಂದು ದೊಡ್ಡ ಸಚಿವಾಲಯ, ಅದರ ಅಧೀನದಲ್ಲಿ ಮೀನುಗಾರಿಕೆ ಇದ್ದ ಕಾರಣ ಹೆಚ್ಚಿನ ಪ್ರಾಶಸ್ತ್ಯ ಲಭಿಸುತ್ತಿರಲಿಲ್ಲ, ಬಜೆಟ್‌ನಲ್ಲೂ ಅನುದಾನ ಸಿಗುತ್ತಿರಲಿಲ್ಲ. ಈ ವಿಚಾರಗಳನ್ನು ಅನೇಕ ಬಾರಿ ಮೀನುಗಾರರು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು. ಕಳೆದ ಸಾಲಿನಲ್ಲಿ ಕರಾವಳಿ ರಾಜ್ಯಗಳ ಪ್ರಮುಖ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಹಾಗೂ ಆಗಿನ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಮುಂದೆ ಈ ಬೇಡಿಕೆ ಇರಿಸಿದ್ದರು.

ಇಷ್ಟಾದ ಬಳಿಕ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಸ್ಥಾಪನೆಯ ಘೋಷಣೆಯಾಗಿತ್ತು. ಮಾತ್ರವಲ್ಲ, ಚುನಾವಣಾ ಪ್ರಚಾರಕ್ಕೆ ಮಂಗಳೂರಿಗೆ ಬಂದಿದ್ದ ಪ್ರಧಾನಿ ಮೋದಿಯವರು ಮೀನುಗಾರರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಪುನರುಚ್ಛರಿಸಿದ್ದರು.
ಮೀನುಗಾರಿಕಾ ಇಲಾಖೆ ಹಿಂದೆ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯದಡಿ ಇತ್ತು. ಅದನ್ನು 1997ರಲ್ಲಿ ಕೃಷಿ ಸಚಿವಾಲಯದ ಅಧೀನಕ್ಕೆ ತಂದು ಪಶುಸಂಗೋಪನೆ, ಹೈನುಗಾರಿಕೆ ಅಭಿವೃದ್ಧಿ ಇಲಾಖೆಯೊಂದಿಗೆ ಸೇರ್ಪಡೆಗೊಳಿಸಲಾಗಿತ್ತು. ಇದೀಗ ಈ ಮೂರನ್ನೂ ಪ್ರತ್ಯೇಕಿಸಿ ಸಚಿವಾಲಯ ಸ್ಥಾನಮಾನ ನೀಡಲಾಗಿದೆ. ಮೀನುಗಾರಿಕೆಯೊಂದನ್ನೇ ಪ್ರತ್ಯೇಕಿಸದಿದ್ದರೂ ಕನಿಷ್ಠ ಕೃಷಿಯ ಅಧೀನದಿಂದ ಹೊರತಂದಿರುವುದು ಮೀನುಗಾರರ ಖುಷಿಗೆ ಕಾರಣವಾಗಿದೆ.

ಕ್ಯಾಬಿನೆಟ್ ಸ್ಥಾನ: ಪ್ರಸ್ತುತ ಘೋಷಿಸಿರುವ ಮಂತ್ರಿಮಂಡಲದಲ್ಲಿ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯಕ್ಕೆ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಗಿರಿರಾಜ್ ಸಿಂಗ್ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಅವರೊಂದಿಗೆ ಸಹಾಯಕ ಸಚಿವರಾಗಿ ಡಾ.ಸಂಜೀವ ಕುಮಾರ್ ಬಲ್ಯಾನ್ ಮತ್ತು ಪ್ರತಾಪ್‌ಚಂದ್ರ ಸಾರಂಗಿ ನೇಮಕಗೊಂಡಿದ್ದಾರೆ.

ಮೀನುಗಾರರಿಗೆ ಏನು ಲಾಭ? 

ಆಳ ಸಮುದ್ರ ಮೀನುಗಾರಿಕೆಗೆ ಮೀನುಗಾರರು ಹೋಗುವಾಗ ಅಂತಾರಾಷ್ಟ್ರೀಯ ಜಲಗಡಿಗಳನ್ನು ದಾಟಿ ಹೋಗುವುದಿದೆ. ಬೇರೆ ದೇಶಗಳ ರಕ್ಷಣಾ ಪಡೆಗಳು ನಮ್ಮ ಮೀನುಗಾರರನ್ನು ಬಂಧಿಸುವುದು, ದೌರ್ಜನ್ಯ ನಡೆಸುವುದು ಕೂಡ ನಡೆಯುತ್ತದೆ. ಬೋಟ್ ದುರಂತಗಳು ಸಂಭವಿಸಿದಾಗಲೂ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಇಲ್ಲದಿರುವುದು ಸಮಸ್ಯೆ. ಇದು ಇತ್ತೀಚಿನ ಸುವರ್ಣ ತ್ರಿಭುಜ ಬೋಟ್ ದುರಂತ ಸಂದರ್ಭ ಜಗಜ್ಜಾಹೀರಾಗಿದೆ. ಪ್ರತ್ಯೇಕ ಸಚಿವಾಲಯ ಇದ್ದರೆ ಉತ್ತರದಾಯಿತ್ವ ಇರುವುದರಿಂದ ಮೀನುಗಾರರಿಗೆ ಸಂವಹನ ನಡೆಸುವುದು ಸುಲಭವಾಗುತ್ತದೆ. ವಿವಿಧ ಸವಲತ್ತು ಸಹಿತ ಬೇಡಿಕೆಗಳ ಈಡೇರಿಕೆಗೂ ಉತ್ತಮ. ಪ್ರತ್ಯೇಕ ಸಚಿವಾಲಯ ರಚನೆ ಹಳೇ ಬೇಡಿಕೆ. ಅಖಿಲ ಭಾರತ ಮೀನುಗಾರರ ಸಂಘಟನೆ ಮೂಲಕ ಗುಜರಾತ್‌ನಿಂದ ತಮಿಳುನಾಡುವರೆಗೂ ಮೀನುಗಾರರನ್ನು ಸಂಘಟಿಸಿ, ಪ್ರಧಾನಿ ಮತ್ತು ವಿತ್ತ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗಿತ್ತು. ಮೀನುಗಾರರಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಭರವಸೆಯಂತೆ ಪ್ರತ್ಯೇಕ ಮೀನುಗಾರಿಕೆ ಸಚಿವಾಲಯ ಬೇಡಿಕೆ ಈಡೇರಿಸಿದ್ದು, ಮುಂದೆ ಅನುಕೂಲವಾಗಲಿದೆ ಎಂಬುದು ಮೀನುಗಾರರ ನಿರೀಕ್ಷೆ.

ಮೀನುಗಾರಿಕೆ ಭಾರಿ ನಷ್ಟದಿಂದ ಸಾಗುತ್ತಿದೆ. ಮೀನುಗಾರಿಕೆಯಲ್ಲಿ ಸಿಕ್ಕ ಲಾಭಾಂಶ ಡೀಸೆಲ್‌ಗೆ ವೆಚ್ಚವಾಗುತ್ತಿದೆ. ಡೀಸೆಲ್ ಭಾರವೇ ನಮಗೆ ಸಾಕಷ್ಟು ಪೆಟ್ಟು ನೀಡುತ್ತಿದೆ. ರಾಜ್ಯ ಸರ್ಕಾರ ಡೀಸೆಲ್‌ಗೆ ನೀಡುವ ಸಬ್ಸಿಡಿಯನ್ನು ಕೇಂದ್ರ ಸರ್ಕಾರವೂ ನೀಡಬೇಕು. ಮೀನುಗಾರಿಕೆ ಸಂಬಂಧಿಸಿದ ಉಪಕರಣಗಳ ಮೇಲಿನ ಜಿಎಸ್‌ಟಿ ಹಿಂತೆಗೆದುಕೊಳ್ಳಬೇಕು ಎಂಬುದು ನಮ್ಮ ಬೇಡಿಕೆ. ಖಂಡಿತವಾಗಿ ಈ ಇದು ಈಡೇರಲಿದೆ ಎಂಬ ವಿಶ್ವಾಸ ನಮ್ಮದು.
– ಸತೀಶ್ ಕುಂದರ್, ಮೀನುಗಾರರ ಸಂಘದ ಅಧ್ಯಕ್ಷ, ಮಲ್ಪೆ

ಕೃಷಿ ಸಚಿವಾಲಯದಡಿ ಇರುವಾಗ ಅವರಿಗೆ ಮೀನುಗಾರಿಕೆಯ ಮಾಹಿತಿಯೇ ಇರುತ್ತಿರಲಿಲ್ಲ, ಎಲ್ಲ ಅನುದಾನವೂ ಕೃಷಿಯತ್ತವೇ ಹೋಗುತ್ತಿತ್ತು. ಕೃಷಿ ಮಹತ್ವದ ಕ್ಷೇತ್ರ ಹೌದು, ಆದರೆ ಮೀನು ಕೂಡ ಆಹಾರ, ಅಪಾರ ಪ್ರಮಾಣದಲ್ಲಿ ರಫ್ತಾಗಿ ವಿದೇಶಿ ವಿನಿಮಯ ಗಳಿಸುತ್ತದೆ, ಇದೊಂದು ವೃತ್ತಿಯಾಗಿ ಉಳಿಯದೆ ದೊಡ್ಡ ಕೈಗಾರಿಕೆಯಾಗಿ ಅಭಿವೃದ್ಧಿ ಹೊಂದಿದೆ, ಹಾಗಿರುವಾಗ ಕಡೆಗಣಿಸುವಂತಿಲ್ಲ, ಪ್ರತ್ಯೇಕ ಸಚಿವಾಲಯ ಬೇಕು ಎಂಬುದು ನಮ್ಮ ನ್ಯಾಯಬದ್ಧ ಬೇಡಿಕೆಯಾಗಿತ್ತು, ಅದೀಗ ನೆರವೇರಿದೆ.
– ನಿತಿನ್ ಕುಮಾರ್, ಮೀನುಗಾರ ಮುಖಂಡ, ಮಂಗಳೂರು

ಕೃಷಿಯಿಂದ ಪ್ರತ್ಯೇಕಿಸಿ ಮೀನುಗಾರಿಕಾ ಸಚಿವಾಲಯ ಸ್ಥಾಪನೆ ವಿಚಾರ ಇನ್ನು ಕೆಲ ದಿನಗಳಲ್ಲಿ ಸ್ಪಷ್ಟಗೊಳ್ಳಬಹುದು, ಆದರೆ ಮೂವರು ಸಚಿವರನ್ನು ನೇಮಿಸಿರುವ ಕಾರಣ ಹಾಗೂ ಇದರಿಂದಾಗಿ ಪ್ರತ್ಯೇಕ ಅಧಿಕಾರಿಗಳೂ ನೇಮಕಗೊಳ್ಳಬಹುದು, ಜತೆಗೆ ಬಜೆಟ್ ಅನುದಾನ ಹೆಚ್ಚಲಿದೆ, ಒಟ್ಟಿನಲ್ಲಿ ಕರಾವಳಿಯ ಮೀನುಗಾರರಿಗೆ ಇದು ಒಳ್ಳೆಯ ಸುದ್ದಿ.
– ಶೋಭಾ ಕರಂದ್ಲಾಜೆ, ಸಂಸದೆ

Leave a Reply

Your email address will not be published. Required fields are marked *