ಮುಸ್ಲಿಂರಿಗೆ ಅನ್ಯಾಯ ಆಗಿದೆ ಅಂತ ಈಗ ಗೊತ್ತಾಯಿತಾ? ಇಷ್ಟು ದಿನ ಬಾಯಿಗೆ ಲಕ್ವಾ ಹೊಡೆದಿತ್ತಾ?

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ ಸಿ ವೇಣುಗೋಪಾಲ್‌, ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡೂರಾವ್‌ ವಿರುದ್ಧ ನೇರ ವಾಗ್ದಾಳಿ ನಡೆಸಿ ಮುಸ್ಲಿಂರನ್ನು ಮತಬ್ಯಾಂಕ್‌ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದ ಮಾಜಿ ಸಚಿವ ರೋಷನ್‌ ಬೇಗ್‌ ವಿರುದ್ಧ ಸಚಿವ ಜಮೀರ್‌ ಅಹ್ಮದ್‌ ವಾಗ್ದಾಳಿ ನಡೆಸಿದ್ದು, ಇಷ್ಟು ದಿನ ಅವರ ಬಾಯಿಗೆ ಲಕ್ವಾ ಹೊಡೆದಿತ್ತಾ ಎಂದು ಪ್ರಶ್ನಿಸಿದ್ದಾರೆ.

ದಿಗ್ವಿಜಯ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಮುಸ್ಲಿಂರಿಗೆ ಅನ್ಯಾಯ ಆಗಿದೆ ಎಂದು ಈಗ ಗೊತ್ತಾಯಿತಾ? ಇಷ್ಟು ದಿನ ಬಾಯಿಗೆ ಲಕ್ವಾ ಹೊಡೆದಿತ್ತಾ? ಯಾಕೆ ಬಾಯಿ ಬಿಚ್ಚಿರಲಿಲ್ಲ? ನಾನು ಸಮುದಾಯದ ಮುಖಂಡ ಅಲ್ಲ ಸಾಮಾನ್ಯ ಕಾರ್ಯಕರ್ತ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇವರಿಗಿಂತಲೂ ಉತ್ತಮ ನಾಯಕ ಇಲ್ಲ ಎಂದು ಹೇಳಿದರು. ಕೀಳು ಮಟ್ಟದ ರಾಜಕಾರಣ ಮಾಡುವುದು ಬೇಡ ಎಂದರು.

ಎಕ್ಸಿಟ್ ಪೋಲ್ ಇಟ್ಕೊಂಡು ರೋಷನ್ ಬೇಗ್ ಹೇಗೆ ಮಾತನಾಡಿದ್ದಾರೋ ಗೊತ್ತಿಲ್ಲ. ಎರಡು ಬಾರಿ ಸಚಿವರಾಗಿದ್ದರು. ಮಂತ್ರಿ ಆದಾಗ ಕಾಂಗ್ರೆಸ್ ಸರಿಯಾಗಿ ಇತ್ತು, ಈಗ ಸರಿಯಿಲ್ಲ ಅಂದ್ರೆ ಹೇಗೆ? ರೋಷನ್ ಬೇಗ್‌ ಎಂಪಿ ಟಿಕೇಟ್ ಕೇಳಿದ್ರು. ಟಿಕೆಟ್ ಕೊಡಲಿಲ್ಲ ಅಂದ್ರೆ ಕಾಂಗ್ರೆಸ್ ಕೆಟ್ಟದ್ದಾ? ಮುಸ್ಲಿಂ ಸಮುದಾಯ ಯಾರೂ ಕೂಡ ಬಿಜೆಪಿಗೆ ಹೊಗುವುದಿಲ್ಲ ಎಂದು ಹೇಳಿದರು.

ಅಧಿಕಾರದ ಮಜಾ ಮಾಡುವಾಗ ಪಕ್ಷ ಚೆನ್ನಾಗಿತ್ತು. ಯಾರೂ ಯಾರ ಅಧಿಕಾರ ಕಿತ್ತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ನಾನೂ ಕೂಡ ನನಗೆ ಮಂತ್ರಿ ಸ್ಥಾನ‌ ಕೊಡ್ತಾರೆ ಎಂದು ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಕೂಡ ಸುಮ್ಮನೆ ಮಂತ್ರಿ ಸ್ಥಾನ ಕೊಡುವುದಿಲ್ಲ. ನಾನೂ ಕೂಡ ಎರಡು ವರ್ಷದ ನಂತರ ಹ್ಯಾರಿಸ್‌ಗೆ ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ. ಸಿದ್ದರಾಮಯ್ಯ ಕಾಲದಲ್ಲಿ ಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಚೆನ್ನಾಗಿದ್ರಾ? ಆಗ ಅವರನ್ನು ಹಾಡಿ ಹೊಗಳಿದ್ದರು ಎಂದು ಕಿಡಿಕಾರಿದರು.

ಎಸ್ ಎಂ ಕೃಷ್ಣ ಕಾಲದಲ್ಲಿ ಲಿಮಿಟೇಷನ್ ಇರಲಿಲ್ಲ. ಈಗ ಲಿಮಿಟೇಷನ್‌ ಇದೆ. ರಹೀಂ ಖಾನ್, ಯುಟಿ ಖಾದರ್, ನನಗೆ ಎಲ್ಲರಿಗೂ ಸಚಿವ ಸ್ಥಾನ ಕೊಟ್ಟಿದ್ದಾರೆ. ನನ್ನ ಡಾಮಿನೇಷನ್ ಇಲ್ಲವೇ ಇಲ್ಲ. ನಾವು ಯಾರು ಪರ್ಮನೆಂಟ್ ಆಗಿ ಗೂಟ ಹೊಡೆದುಕೊಂಡು ಕೂರುವುದಕ್ಕೆ ಆಗುತ್ತಾ? ಇಷ್ಟು ದಿನ ಯಾಕೆ ಸುಮ್ನೆ ಇದ್ರು..? ಬಹುಶಃ ರೋಷನ್ ಬೇಗ್ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಕ್ಕೆ ತೀರ್ಮಾನ ಮಾಡಿರಬಹುದು ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *