ತಿದ್ದಿಕೊಳ್ಳದಿದ್ರೆ ಸಚಿವರು ಕಿಕ್​ಔಟ್! ಎಚ್ಚರಿಕೆ ಜತೆಗೆ 2 ತಿಂಗಳ ಡೆಡ್​ಲೈನ್ ಕೊಟ್ಟ ಕಾಂಗ್ರೆಸ್ ಹೈಕಮಾಂಡ್

CM Siddaramaiah

ಬೆಂಗಳೂರು: ಮುಂದಿನ ಎರಡು ತಿಂಗಳಲ್ಲಿ ಕಾರ್ಯವೈಖರಿ ಸುಧಾರಿಸಿಕೊಳ್ಳದಿದ್ದಲ್ಲಿ ಮುಲಾಜಿಲ್ಲದೇ ಸಂಪುಟದಿಂದ ಕೈಬಿಡುವುದಾಗಿ ಸಿದ್ದರಾಮಯ್ಯ ಸಂಪುಟದ ಭಾಗಶಃ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಖಡಕ್ ಎಚ್ಚರಿಕೆ ನೀಡಿದೆ. ಲೋಕಸಭೆ ಚುನಾವಣೆ ಸೋಲಿನ ಪರಾಮರ್ಶೆ ಬಗ್ಗೆ ಮಧುಸೂಧನ್ ಮಿಸ್ತ್ರಿ ಸಮಿತಿ ಸಲ್ಲಿಸಿದ್ದ ವರದಿಯೊಂದಿಗೆ ರಾಜ್ಯಕ್ಕೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮುಖ್ಯವಾಗಿ ಎರಡು ಪ್ರಮುಖ ಅಂಶಗಳನ್ನು ಮುಂದಿಟ್ಟುಕೊಂಡು ಸಂಪುಟ ಸದಸ್ಯರೊಂದಿಗೆ ಸಭೆ ನಡೆಸಿದರು.

ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣದಲ್ಲಿ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ತಂತ್ರ ಹಣೆದಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಸಚಿವರು ಸಿಎಂ ಜತೆಗೆ ನಿಲ್ಲಬೇಕು ಎಂದು ತಾಕೀತು ಮಾಡಿದರು. ಇದರ ಜತೆಗೆ ತಿಂಗಳ ಹಿಂದಷ್ಟೇ ಎಐಸಿಸಿ ನಿಯೋಜಿತ ಮಧುಸೂದನ್ ಮಿಸ್ತ್ರಿ ಸಮಿತಿ ಮುಂದೆ ಶಾಸಕರು, ಪದಾಧಿಕಾರಿಗಳು ತೋಡಿಕೊಂಡ ದೂರು-ದುಮ್ಮಾನಗಳನ್ನು ಮುಂದಿಟ್ಟುಕೊಂಡು ಸಚಿವರಿಗೆ ಕಿವಿಹಿಂಡುವ ಕೆಲಸವನ್ನು ಕಾಂಗ್ರೆಸ್ ವರಿಷ್ಠರು ಮಾಡಿದರು. ಶಾಸಕರಿಗೆ ಮುಖ ಕೊಟ್ಟು ಮಾತನಾಡದ, ಕಾರ್ಯಕರ್ತರು- ಮುಖಂಡರಿಗೆ ಸ್ಪಂದಿಸದ, ಇಲಾಖೆ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ ಸಚಿವರಿಗೆ ಇದು ಕಡೇ ವಾರ್ನಿಂಗ್. ಇನ್ನೆರಡು ತಿಂಗಳಲ್ಲಿ ಸುಧಾರಿಸಿಕೊಳ್ಳದೇ ಹೋದರೆ ಮುಲಾಜಿಲ್ಲದೆ ಸಚಿವ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದರು.

ಲೋಕ ಹಿನ್ನಡೆಗೆ ಕಿಡಿ: ಲೋಕಸಭೆ ಚುನಾವಣೆಯಲ್ಲಿ 17 ಸಚಿವರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಕಡಿಮೆಯಾದ ವಿಚಾರವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರ ರಚನೆಯಾಗಿ ಒಂದೇ ವರ್ಷದಲ್ಲಿ ಹಿಂದೆ ಬೀಳಲು ಕಾರಣವಾಗಿದ್ದೇನು ಎಂದು ಪ್ರಶ್ನಿಸಿದರು. ಸಚಿವರು ತಮ್ಮ ತಮ್ಮ ಇಲಾಖೆಯ ಒಂದು ವರ್ಷದ ಸಾಧನಾ ವರದಿಯೊಂದಿಗೆ ಹಾಜರಾಗಿದ್ದರು, ತಮಗೆ ಸಿಕ್ಕ ಅವಕಾಶದಲ್ಲಿ ಏನೆಲ್ಲ ಮಾಡಿದ್ದೇವೆ ಎಂದು ಹೇಳಲು ಪ್ರಯತ್ನ ಮಾಡಿದರು. ಇದೇ ವೇಳೆ, ಹೆಚ್ಚಿನ ಸಚಿವರ ವಿರುದ್ಧ ದೂರುಗಳು ಏಕೆ ಬರುತ್ತಿವೆ? ಯಾಕೆ ಹೊಂದಾಣಿಕೆ ಕೊರತೆ ಕಾಣಿಸುತ್ತಿದೆ? ಪರಸ್ಪರ ಆರೋಪಗಳೇಕೆ? ಎಂದು ಪ್ರಶ್ನಿಸಿದ ಕೆ.ಸಿ.ವೇಣುಗೋಪಾಲ್, ವಾಲ್ಮೀಕಿ ನಿಗಮದಲ್ಲಿ ಅಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮುಂದೆ ಇಂತಹದ್ದು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ತಾಕೀತು ಮಾಡಿದರು. ಮುಖ್ಯವಾಗಿ, ಬಿಜೆಪಿ- ಜೆಡಿಎಸ್​ನವರ ತಪು್ಪ ಮುಚ್ಚಿಡಲು ಏಕೆ ಪ್ರಯತ್ನಿಸುತ್ತಿದ್ದೀರಿ, ಅವರು ಮಾಡಿದ ತಪ್ಪನ್ನು ಎತ್ತಿ ತೋರಿಸಿ, ನೀವು ಏನು ಕೆಲಸ ಮಾಡಿದ್ದೀರೋ ಅದನ್ನು ಜನರಿಗೆ ತಿಳಿಸಿ ಎಂದು ಸಲಹೆ ನೀಡಿದರು.

ಮುಂದಿನ ಕಾರ್ಯತಂತ್ರ ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಬಹು ಸಮಯ ಪ್ರತ್ಯೇಕ ಸಭೆ ನಡೆಸಿ, ರಾಜ್ಯಪಾಲರ ನಡೆ ಬಗ್ಗೆ ಚರ್ಚೆ ನಡೆಸಿದರು. ಮುಡಾ ಹಗರಣ ವಿಚಾರವಾಗಿ ಅಭಿಯೋಜನೆಗೆ ಅವಕಾಶ ನೀಡುವ ಸಂಬಂಧ ನೋಟಿಸ್ ನೀಡಿದ ಬಳಿಕ ಮುಂದಿನ ಪ್ರಕ್ರಿಯೆ ಏನೇನಿರುತ್ತದೆ? ರಾಜ್ಯಪಾಲರ ಹೆಜ್ಜೆ ಗುರುತೇನು? ಈ ಪ್ರಕರಣದ ಹಿಂದೆ ಕೇಂದ್ರದ ಹಸ್ತಕ್ಷೇಪ ಇದೆಯೇ? ಒಂದೊಮ್ಮೆ ಅಭಿಯೋಜನೆಗೆ ನೀಡಿದರೆ ಮುಂದೆ ಏನು ಮಾಡಬೇಕು? ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಯಾವುದು? ಆ ಪ್ರಕರಣಗಳಲ್ಲಿ ಯಾರನ್ನು ಕಟ್ಟಿಹಾಕಿ ಬಿಜೆಪಿಗೆ ಮುಜುಗರ ಉಂಟುಮಾಡಬಹುದು ಎಂದು ಚರ್ಚೆ ನಡೆಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಅರ್ಥ ಮಾಡಿಸಲು ವೈಫಲ್ಯ

ವಾಲ್ಮೀಕಿ ಪ್ರಕರಣದಲ್ಲಾಗಲಿ, ಮುಡಾ ಪ್ರಕರಣದಲ್ಲಾಗಲಿ ಸರ್ಕಾರ ಮತ್ತು ಸಚಿವರ ಲೋಪ ಇಲ್ಲ. ಸುಪ್ರೀಂಕೋರ್ಟ್ ನಿವೃತ್ತ ಇಒಗಳಿಂದ ಮತ್ತು ಸುಪ್ರೀಂಕೋರ್ಟ್ ಹಿರಿಯ ಕೌನ್ಸಿಲ್​ಗಳಿಂದ ದಾಖಲೆಗಳ ಪರಿಶೀಲನೆ ನಡೆಸಿದ್ದೇವೆ. ಎರಡೂ ಪ್ರಕರಣದಲ್ಲಿ ಸರ್ಕಾರದ ಪಾತ್ರ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಿದ್ದೂ ರಾಜ್ಯದ ಜನರಿಗೆ ಸರಿಯಾಗಿ ಅರ್ಥ ಮಾಡಿಸುವಲ್ಲಿ ಸೋತಿದ್ದೀರಿ ಎಂದುವೇಣುಗೋಪಾಲ್ ಸಚಿವರ ವಿರುದ್ಧ ಹರಿಹಾಯ್ದರೆಂದು ಗೊತ್ತಾಗಿದೆ.

ರಾಜ್ಯ ನಾಯಕರಿಗೆ ಏನೇನು ಪಾಠ?

  • ಪಕ್ಷದ ಶಾಸಕರ ಬೇಡಿಕೆ ಈಡೇರಿಸಲು ಪ್ರಯತ್ನಿಸಿ
  • ಪಕ್ಷದ ಮುಖಂಡರು, ಕಾರ್ಯಕರ್ತರ ವಿಶ್ವಾಸ ಗಳಿಸಿ
  • ನಿಗಮ- ಮಂಡಳಿ ಅಧ್ಯಕ್ಷರ ಜತೆ ಸಮನ್ವಯ ಸಾಧಿಸಿ
  • ಜನಮನ್ನಣೆಗೆ ಇಲಾಖೆ ಕೆಲಸದಲ್ಲಿ ಹೆಚ್ಚು ಆಸಕ್ತಿವಹಿಸಿ
  • ಮುಂಬರುವ ಚುನಾವಣೆ ಗಳಲ್ಲಿ ಸಾಮರ್ಥ್ಯ ತೋರಿಸಿ

ಸಿಎಂ ಬೆನ್ನಿಗೆ ವರಿಷ್ಠರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಖುರ್ಚಿಗೆ ಒದಗಬಹುದಾದ ಸಂಭಾವ್ಯ ಸಂಚಕಾರ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಪ್ರತಿ ಹೋರಾಟಕ್ಕೆ ಸಜ್ಜಾಗಿದೆ. ಎಐಸಿಸಿ ಸಿದ್ದರಾಮಯ್ಯ ಜತೆ ನಿಲ್ಲಲಿದೆ, ಯಾವುದೇ ಕಾರಣಕ್ಕೆ ಜಗ್ಗದೇ ಕುಗ್ಗದೇ ಅಪಸ್ವರ ಎತ್ತದೇ ಸಿಎಂ ಜತೆ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಎಐಸಿಸಿ ತಾಕೀತು ಮಾಡಿದೆ. ಭಾನುವಾರ ಸಿಎಂ ಮನೆಯಲ್ಲಿ ಸಚಿವರ ಸಭೆ ನಡೆಸಿದ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಪಕ್ಷದ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಗಂಭೀರ ಬೆಳವಣಿಗೆಗಳ ಕುರಿತು ರಾಜ್ಯದ ಸಚಿವರೊಂದಿಗೆ ರ್ಚಚಿಸಲಾಯಿತು. ಬಿಜೆಪಿ-ಜೆಡಿಎಸ್ ಪಿತೂರಿಗೆ ನಾವು ಜಗ್ಗುವುದಿಲ್ಲ. ನಾವು ಜನರ ಬಳಿಗೆ ಹೋಗುತ್ತೇವೆ. ಅವರಿಗೆ ವಾಸ್ತವಾಂಶ ವಿವರಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳು ಬಿಜೆಪಿ ಮತ್ತು ಜೆಡಿಎಸ್​ನವರಿಗೆ ರಾಜಕೀಯವಾಗಿ ನಷ್ಟ ಉಂಟು ಮಾಡಲಿದೆ ಹಾಗೂ ವಿವಿಧ ಪ್ರಕರಣಗಳ ತನಿಖೆಯಿಂದ ವೈಯಕ್ತಿಕವಾಗಿಯೂ

ತೊಂದರೆಯಾಗಲಿದೆ ಎಂಬುದು ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದರು. ರಾಜ್ಯಪಾಲರು ಬಿಜೆಪಿ ಪಿತೂರಿಯ ಸಾಧನವಾಗಿದ್ದಾರೆ. ಮುಖ್ಯಮಂತ್ರಿಯವರಿಗೆ ಕಾರಣ ಕೇಳಿ ನೋಟೀಸ್ ನೀಡುವ ಮೂಲಕ ಸರ್ಕಾರ ಅಸ್ಥಿರಗೊಳ್ಳಲಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವು ಈ ಪಿತೂರಿ ವಿರುದ್ಧ ಹೋರಾಡಲು ತೀರ್ವನಿಸಿದೆ ಎಂದರು. ಬಿಜೆಪಿ ಸರ್ಕಾರಗಳನ್ನು ಉರುಳಿಸುವ ಇತಿಹಾಸ ಹೊಂದಿದೆ. 2018ರಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿದ್ದೇ ಬಿಜೆಪಿ ಕೇಂದ್ರ ನಾಯಕತ್ವದ ಪಿತೂರಿಯಿಂದ. ಅದೇ ರೀತಿಯ ಸ್ಪಷ್ಟ ಉದ್ದೇಶದಿಂದ ಈಗಲೂ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದರು. ಎಲ್ಲರಿಗೂ ಸಿದ್ದರಾಮಯ್ಯ ಅವರ ಪ್ರಾಮಾಣಿಕತೆಯ ಅರಿವಿದೆ. ಅವರು ಮುಖ್ಯಮಂತ್ರಿ ಪದವಿಗೆ ಹೊಸಬರಲ್ಲ. ಅವರ ರಾಜಕೀಯ ಬದುಕು, ತತ್ವ ಸಿದ್ಧಾಂತ, ಹಿನ್ನೆಲೆ ಅವರು ಹಿಂದೆ ಹೇಗಿದ್ದರು, ಈಗ ಹೇಗಿದ್ದಾರೆ ಎಂಬುದು ಕರ್ನಾಟಕದ ಜನತೆಗೆ ಚೆನ್ನಾಗಿ ತಿಳಿದಿದೆ ಎಂದರು. ರಾಜ್ಯದ ಜನತೆಗೆ ವಾಸ್ತವಾಂಶದ ಅರಿವು ಮೂಡಿಸಲು ನಿರ್ಧರಿಸಿದೆ.

ಸಚಿವರು, ಶಾಸಕರು ಜಿಲ್ಲೆಗಳು, ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಗೆ ಸರ್ಕಾರದ ಸಾಧನೆಗಳನ್ನು ವಿವರಿಸಿ, ಗ್ಯಾರಂಟಿ ಯೋಜನೆಗಳನ್ನು ಮುಗಿಸುವ ಬಿಜೆಪಿ-ಜೆಡಿಎಸ್ ನ ಹುನ್ನಾರವನ್ನು ಬಯಲಿಗೆಳೆಯಲಾಗುವುದು ಎಂದು ಹೇಳಿದರು. ಆರೋಪಗಳ ಕುರಿತು ಕಾನೂನು ತನ್ನದೇ ಕ್ರಮ ವಹಿಸಲಿದೆ. ಈ ಬಗ್ಗೆ ನಮಗೆ ಯಾವುದೇ ಅಳುಕಿಲ್ಲ. ನಿಜವಾಗಿಯೂ ಸಮಸ್ಯೆ ಇದ್ದರೆ ಕಾನೂನಿನ ಮೊರೆ ಹೋಗಲಿ. ಅದರ ಬದಲಾಗಿ ಪ್ರತಿದಿನ ಸಿದ್ದರಾಮಯ್ಯ ವಿರುದ್ಧ ಪದೇಪದೆ ಭ್ರಷ್ಟಾಚಾರ ಆರೋಪ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ತಾರತಮ್ಯ ಕುರಿತು ಯಾರೂ ಮಾತನಾಡುತ್ತಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲ ಹಾಜರಿದ್ದರು.

ವಯನಾಡು ಭೂದುರಂತ: ಈ ವಿಷಯದಲ್ಲಿ ಎಚ್ಚರಿಕೆ! ಸುಳ್ಳು ಸುದ್ದಿ ಹಬ್ಬಿಸಬೇಡಿ; ಆರೋಗ್ಯ ಸಚಿವೆ ಖಡಕ್ ವಾರ್ನಿಂಗ್

Share This Article

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…