ಶಿವಮೊಗ್ಗ: ಗೋವಿಂದೇಗೌಡ, ಸುರೇಶ್‌ಕುಮಾರ್, ಬಿ.ಸಿ.ಯೋಗೇಶ್ ಅವರಂತಹ ಅನೇಕರು ಶಿಕ್ಷಣ ಸಚಿವರಾಗಿ ಇಲಾಖೆಗೆ ಸಾಕಷ್ಟು ಗೌರವ ತಂದುಕೊಟ್ಟಿದ್ದರು. ಆದರೆ ಮಧು ಬಂಗಾರಪ್ಪ ಶಿಕ್ಷಣ ಸಚಿವರಾಗಿ ಆ ಹುದ್ದೆಗೆ ಅಗೌರವ ತಂದಿದ್ದಾರೆ. ಹುದ್ದೆಗಿದ್ದ ಘನತೆಯನ್ನೂ ಹಾಳುಮಾಡುತ್ತಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಿಡಿಕಾರಿದರು.
ಶಿಕ್ಷಣ ಸಚಿವರ ನಡೆ, ನುಡಿ ಜವಾಬ್ದಾರಿಯುತವಾಗಿರಬೇಕು. ಶಿಸ್ತಿನಿಂದ ವರ್ತಿಸಬೇಕು. ಆದರೆ ಇಂದಿನ ಶಿಕ್ಷಣ ಸಚಿವರಲ್ಲಿ ಆ ಗುಣಲಕ್ಷಣಗಳಲ್ಲಿ ಒಂದೂ ಕಾಣಿಸುತ್ತಿಲ್ಲ. ಶಿಕ್ಷಣ ಇಲಾಖೆಯಲ್ಲಿ ಸಿ ಆ್ಯಂಡ್ ಆರ್ ಸಮಸ್ಯೆ ಬಗೆಹರಿಸುವಂತೆ ಶಿಕ್ಷಕರು ಪ್ರತಿಭಟನೆ ಮಾಡುತ್ತಿದ್ದಾರೆ. ಶಿಕ್ಷಕರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸವಾಲು ಹಾಕುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಯನ್ನು ಒಮ್ಮೆ ಕಣ್ತೆರೆದು ನೋಡಿ ಮಾತನಾಡಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪಾದಯಾತ್ರೆ ಮಾಡಿದರೆ ಒಬಿಸಿ ನಾಯಕನಿಗೆ ಮಾಡಿದ ಅವಮಾನವೆಂದು ಮಧು ಬಂಗಾರಪ್ಪ ಹೇಳಿದ್ದಾರೆ. ದುರ್ಬಲರ ಅಂತಿಮ ಅಸ್ತ್ರ ಜಾತಿ ಬಳಕೆ. ಅದನ್ನು ಇಲ್ಲಿಯೂ ಅವರು ಬಳಸಿದ್ದಾರೆ. ಚುನಾವಣೆಯಲ್ಲಿ ಯಾರೂ ಜಾತಿ ಆಧಾರದಲ್ಲಿ ಗೆದ್ದು ಬಂದಿಲ್ಲ ಎಂದು ಸಚಿವರನ್ನು ತರಾಟೆ ತೆಗೆದುಕೊಂಡ ಬಿವೈಆರ್, ಸವಾಲು ಹಾಕುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿ ಕಡೆಗೆ ಸಚಿವರು ಗಮನ ಹರಿಸಬೇಕು. ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರ ಬಂದಾಗ ಒಂದೂವರೆ ವರ್ಷದಿಂದ ಹೇಳಿದ್ದನ್ನೇ ಹೇಳುತ್ತಿದ್ದಾರೆ. ಒಂದೂವರೆ ವರ್ಷ ಆದರೂ ಯಾವುದೇ ಪ್ರಗತಿ ಕಂಡಿಲ್ಲ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಶಿವಮೊಗ್ಗಕ್ಕೆ ಕರೆತಂದು ಅವರಿಂದ ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿಸಿದ್ದೀರಿ. ಆದರೆ ಮತ್ತೊಂದೆಡೆ ನೋಟಿಸ್ ಕೊಡಿಸುವ ಕೆಲಸ ಮಾಡುತ್ತಿದ್ದೀರಿ ಎಂದು ದೂರಿದರು.