ಕಸಾಯಿಖಾನೆಗೆ ಸ್ಮಾರ್ಟ್ ಹಣ!

ಮಂಗಳೂರು: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅಡಿ ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ 15 ಕೋಟಿ ರೂ.ಗಳನ್ನು ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿಗೆ ನೀಡುವುದಾಗಿ ಘೋಷಿಸಿರುವ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ನಡೆ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಗೋಶಾಲೆ ನಿರ್ಮಾಣ, ನಿರ್ವಹಣೆಗೆ ಆಸಕ್ತಿ ತೋರದೆ ಅನುದಾನವನ್ನೂ ನೀಡದ ರಾಜ್ಯ ಸರ್ಕಾರ ಜಾನುವಾರುಗಳನ್ನು ಅಕ್ರಮ ಸಾಗಾಟ ಮಾಡಿ ಗೋಹತ್ಯೆ ನಡೆಸಲಾಗುತ್ತಿದೆ ಎಂಬ ಆರೋಪವಿರುವ ಕಸಾಯಿಖಾನೆಗೆ ಅನುದಾನದ ಭರವಸೆ ನೀಡಿರುವುದು ಚರ್ಚೆಗೊಳಪಟ್ಟಿದೆ.

15 ಕೋಟಿ ರೂ. ಏಕೆ?: ಲಭ್ಯ ಮಾಹಿತಿ ಪ್ರಕಾರ ಸ್ಮಾರ್ಟ್​ಸಿಟಿ ಯೋಜನೆಯಡಿ ನಿರ್ವಿುಸಲು ಹೊರಟಿರುವ ಸುಸಜ್ಜಿತ ಅತ್ಯಾಧುನಿಕ ಕಸಾಯಿಖಾನೆ ಇದಾಗಿದೆ. ಇದರ ತ್ಯಾಜ್ಯ ಸಂಸ್ಕರಣಾ ಸ್ಥಾವರಕ್ಕೆ 5 ಕೋಟಿ ರೂ. ಅಗತ್ಯವಿದೆ. ಸುಸಜ್ಜಿತ ಕಟ್ಟಡ, ವಧಾಗೃಹ, ಪ್ರಾಣಿಗಳನ್ನು ಕಟ್ಟಿ ಹಾಕುವ ಜಾಗ ಮತ್ತಿತರ ಉದ್ದೇಶಕ್ಕೆಂದು ಒಟ್ಟಾರೆಯಾಗಿ 15 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗಿದೆ. ವಿಸõತ ಕಾರ್ಯಯೋಜನೆ- ಡಿಪಿಆರ್ ಇನ್ನೂ ಆಗಿಲ್ಲ. ಇದಕ್ಕೆ ಸ್ಮಾರ್ಟ್​ಸಿಟಿ ಉನ್ನತ ಸಮಿತಿಯಿಂದ ಅನುಮೋದನೆಯೂ ದೊರಕಬೇಕಿದೆ ಎನ್ನುವುದು ಸ್ಮಾರ್ಟ್​ಸಿಟಿ ಅಧಿಕಾರಿಗಳು ನೀಡುವ ವಿವರಣೆ.

ಗೋಶಾಲೆಗಳ ಕಡೆಗಣನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12ಕ್ಕೂ ಅಧಿಕ ಗೋಶಾಲೆಗಳಿದ್ದು, ಇವುಗಳಿಗೆ ಸರಿಯಾಗಿ ಅನುದಾನ ಬರುತ್ತಿಲ್ಲ. ಎಲ್ಲ ಅರ್ಹತೆಗಳಿದ್ದರೂ 2008ರಲ್ಲಿ ಸುವರ್ಣ ಕರ್ನಾಟಕ ಗೋತಳಿ ಸಂರಕ್ಷಣಾ ಯೋಜನೆಯಡಿ ಅನುದಾನ ಪಡೆಯಲಾಗಿದೆ ಎಂಬ ನೆಪದಲ್ಲಿ ಈಗ ನಿರ್ವಹಣೆಗೆ ಅನುದಾನ ನಿರಾಕರಿಸಲಾಗುತ್ತಿದೆ. ಸರಿಯಾಗಿ ಹಣ ವಿತರಣೆಯಾಗದ ಹಿನ್ನೆಲೆಯಲ್ಲಿ ಈ ಬಾರಿ 6 ಗೋಶಾಲೆಗಳಷ್ಟೇ ಅನುದಾನಕ್ಕೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 2 ಅರ್ಜಿ ತಡೆಯಲಾಗಿದೆ.

ಪಜೀರು ಗೋ ವನಿತಾಶ್ರಯ ಟ್ರಸ್ಟ್ ಗೋಶಾಲೆ ಮತ್ತು ವಿಟ್ಲದ ಮುಳಿಯದಲ್ಲಿರುವ ಗೋಗ್ರಾಸ ಮಂಡಳಿ ಅಮೃತಧಾರೆ ಗೋಶಾಲೆ ಅನುದಾನದಿಂದ ವಂಚಿತವಾಗಿವೆ. ಪಜೀರು ಗೋಶಾಲೆಯಲ್ಲಿ 300ಕ್ಕೂ ಅಧಿಕ ಗೋವುಗಳಿವೆ. ಇದರಲ್ಲಿ ಬಹುತೇಕ ಗೊಡ್ಡು ದನಗಳು ಹಾಗೂ ಎತ್ತುಗಳು. ಹಾಲು ಕರೆಯುವಂತಹವು 30ರಷ್ಟಿವೆ. ಇವುಗಳಿಗೆ ಮಾಸಿಕ ಖರ್ಚಿಗೆ 6.5 ಲಕ್ಷ ರೂ. ಬೇಕು. ಅಂತಹ ದನಗಳನ್ನು ಪೊಲೀಸರು ಇಲ್ಲಿ ತಂದು ಬಿಡುತ್ತಾರೆ. ಆದರೆ ಇದರ ನಿರ್ವಹಣೆಗೆ ನೆರವು ನೀಡುತ್ತಿಲ್ಲ. ಹೆಚ್ಚಿನ ಗೋ ಶಾಲೆಗಳ ಸ್ಥಿತಿ ಇದೇ ಆಗಿದೆ ಎನ್ನುತ್ತಾರೆ ಟ್ರಸ್ಟ್ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್. ಮುಳಿಯದ ಗೋಶಾಲೆಯ ಪರಿಸ್ಥಿತಿಯೂ ಇದೇ. ಇಲ್ಲಿ 50ಕ್ಕೂ ಅಧಿಕ ಅಧಿಕ ದನಗಳಿವೆ. 2008ರಲ್ಲಿ ತಳಿ ಅಭಿವೃದ್ಧಿಗೆ ಹೊರತುಪಡಿಸಿ ನಿರ್ವಹಣೆ ವೆಚ್ಚವಾಗಿ ಪ್ರತಿ ದನಕ್ಕೆ 17 ರೂ.ನಂತೆ ಸಿಗುತ್ತಿಲ್ಲ. ನಾವು ಅಂದು ಅನುದಾನ ಪಡೆದಿದ್ದು, ತಳಿ ಅಭಿವೃದ್ಧಿಗೆ. ಈಗ ನಿರ್ವಹಣೆಗೆ ಹಣ ಕೇಳುತ್ತಿದ್ದೇವೆ. ಆದರೆ ಸರ್ಕಾರ ತಳಿ ಅಭಿವೃದ್ಧಿಗಾಗಿ ಪಡೆದಿದ್ದನ್ನು ತೋರಿಸಿ ಈಗ ನಿರಾಕರಿಸುತ್ತಿದೆ ಎನ್ನುತ್ತಾರೆ ಅಮೃತಧಾರೆಯ ಕಾರ್ಯದರ್ಶಿ ದೇಲಂತಬೆಟ್ಟು ನಾರಾಯಣ ಭಟ್.

ಉಡುಪಿ ಜಿಲ್ಲೆಯಲ್ಲಿ 3 ನೋಂದಾಯಿತ ಗೋಶಾಲೆಗಳಿವೆ. ಶಿರೂರು, ನೀಲಾವರ ಹಾಗೂ ಕಾರ್ಕಳ ವೆಂಕಟರಮಣ ಗೋಶಾಲೆಗಳಿಗೆ ಕಳೆದ ಸಾಲಿನಲ್ಲಿ ಸರ್ಕಾರ ಒಟ್ಟು 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಸ್ಥಳೀಯ ತಳಿಗಳ ಅಭಿವೃದ್ಧಿ ಮತ್ತು ಸಾಕಾಣಿಕೆಗೆ ಸರ್ಕಾರ ಪ್ರತಿವರ್ಷ ಅನುದಾನ ನೀಡುತ್ತದೆ. ಶಿರೂರು ಗೋಶಾಲೆಯಲ್ಲಿ 80, ನೀಲಾವರದಲ್ಲಿ 600, ಕಾರ್ಕಳದಲ್ಲಿ 60 ಸ್ಥಳೀಯ ದನಗಳಿವೆ. ಉಳಿದ ದನಗಳ ಖರ್ಚುವೆಚ್ಚವನ್ನು ಆಯಾ ಟ್ರಸ್ಟ್​ಗಳೇ ಭರಿಸಬೇಕಾಗಿದೆ.

ದ.ಕ. ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗೋ ಹತ್ಯೆಗೆ ಪ್ರೋತ್ಸಾಹ ನೀಡಿದಂತಾಗಿದೆ. ಅನುದಾನ ನೀಡಿರುವುದು ಸಂಘರ್ಷಕ್ಕೆ ದಾರಿಯಾದೀತು. ಇದು ಸ್ಮಾರ್ಟ್​ಸಿಟಿಯಲ್ಲ, ಸ್ಮಾರ್ಟ್ ಕಸಾಯಿಖಾನೆ. ಈ ಬಗ್ಗೆ ಪ್ರತಿಭಟನೆ ನಡೆಸಲಾಗುವುದು.

| ಜಗದೀಶ್ ಶೇಣವ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ

 

ಕಸಾಯಿಖಾನೆಗೆ ಕೇಂದ್ರ ಸರ್ಕಾರ ಅನುದಾನ ನೀಡಿದ್ದು, ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಹಣ ಮಂಜೂರು ಮಾಡಲಾಗಿದೆ. ಯೋಜನೆ ನಿರ್ದೇಶಕರು ಹಾಗೂ ಸಂಸದ ನಳಿನ್ ಈ ಬಗ್ಗೆ ಉತ್ತರಿಸಬೇಕು. ಸ್ಮಾರ್ಟ್ ಸಿಟಿ ಡೋಂಗಿ ಪರಿಕಲ್ಪನೆ, ಇದರಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಜನರಿಗೆ ಮೋಸ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶ.

| ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ

 

ಸಚಿವ ಖಾದರ್ ಹಿಂದು ವಿರೋಧಿ ನೀತಿ ಕೈಬಿಡಬೇಕು. ಸರ್ಕಾರಿ ಹಣ ಅಭಿವೃದ್ಧಿಗೆ ಉಪಯೋಗವಾಗಬೇಕು. ಆದರೆ ಸಚಿವ ಯು.ಟಿ ಖಾದರ್​ಗೆ ಕಸಾಯಿಖಾನೆಗಳ ಬಗ್ಗೆ ಜಾಸ್ತಿ ಆಸಕ್ತಿ ಇದೆ. ಹೀಗಾಗಿ ಕಸಾಯಿಖಾನೆ ಮುಚ್ಚಲು ಸರ್ಕಾರಕ್ಕೆ ತಾಕತ್ತಿಲ್ಲ. ಅಕ್ರಮ ಗೋವು ಸಾಗಾಟ ತಡೆಯುತ್ತಿಲ್ಲ. ಈ ಬಗ್ಗೆ ಮೂರು ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಲಿದ್ದೇವೆ.

| ಸುನೀಲ್ ಕುಮಾರ್, ವಿಧಾನಸಭೆ ಪ್ರತಿಪಕ್ಷ ಮುಖ್ಯ ಸಚೇತಕ

 

ಕೇಂದ್ರ ಸರ್ಕಾರವೇ ಇದಕ್ಕೆ ಅವಕಾಶ ನೀಡಿದೆ, ಸ್ಮಾರ್ಟ್​ಸಿಟಿ ಸಭೆಯಲ್ಲಿದ್ದ ಬಿಜೆಪಿಯವರು ಇದಕ್ಕೆ ಅಪಸ್ವರ ಎತ್ತಿಲ್ಲ. ಸ್ಮಾರ್ಟ್​ಸಿಟಿಯಲ್ಲಿ ಗೋಶಾಲೆ ಅಭಿವೃದ್ಧಿ ಸೇರಿಸಿ ಎಂದೂ ಹೇಳಬಹುದಿತ್ತು. ರಾಜಕೀಯ ಪ್ರೇರಿತವಾಗಿ ಬಿಜೆಪಿಯವರು ಮಾತನಾಡುತ್ತಿದ್ದಾರೆ. ನಗರ ಸ್ವಚ್ಛವಾಗದೆ ಸ್ವಚ್ಛ ಭಾರತ ಆಗುವುದು ಹೇಗೆ? ಸ್ವಚ್ಛತೆ ಅಡಿಯಲ್ಲೇ ಕಸಾಯಿಖಾನೆ ಅಭಿವೃದ್ಧಿಗೆ ಯೋಜಿಸಲಾಗಿದೆ.

| ಯು.ಟಿ.ಖಾದರ್ ಜಿಲ್ಲಾ ಉಸ್ತುವಾರಿ ಸಚಿವ

 

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಸ್ಮಾರ್ಟ್​ಸಿಟಿ ಅನುಷ್ಠಾನ ಆಗುತ್ತಿದೆ. ಆದರೆ ಯೋಜನೆಗಳ ಬಗ್ಗೆ ಪ್ರಾಥಮಿಕ ಜ್ಞಾನವಿಲ್ಲದೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ, ಸ್ಮಾರ್ಟ್ ಸಿಟಿಯಲ್ಲಿ ಇದುವರೆಗೆ ಸಲಹಾ ಸಮಿತಿ ರಚನೆಯಾಗಿಲ್ಲ. ಪೂರ್ಣಪ್ರಮಾಣದ ಎಂಡಿ ಕೂಡ ಇಲ್ಲ. ಉಸ್ತುವಾರಿ ಸಚಿವರಿಗೆ ತೋಚಿದಂತೆ ಕೆಲವು ಯೋಜನೆಗಳನ್ನು ಯೋಜಿಸಲಾಗುತ್ತಿದೆ. ನಗರದ ಸಮಗ್ರ ಅಭಿವೃದ್ಧಿಗೆ ಅನುದಾನ ಬಳಸುವ ಬದಲು ಕಸಾಯಿಖಾನೆಗೆ ಹಾಕುತ್ತಿರುವುದು ಸರಿಯಲ್ಲ. ಅದಕ್ಕೆ ಅವಕಾಶ ಕೊಡುವುದಿಲ್ಲ.

| ನಳಿನ್ ಕುಮಾರ್ ಕಟೀಲ್ ಸಂಸದ