ಬೆಂಗಳೂರು: ಸದಾ ಬಿಜಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಜೆ ನಮ್ಮ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಫೋನ್ ಮಾಡಿ ಮಾತನಾಡಿದ್ದಾರೆ!
ಈ ವಿಷಯವನ್ನು ಸ್ವತಃ ಸುಧಾಕರ್ ಅವರೇ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ‘‘ಕೇಂದ್ರ ಸಚಿವ ಅಮಿತ್ ಶಾ ಅವರು ಫೋನ್ ಮಾಡಿ ಕರೊನಾ ಸೋಂಕಿಗೆ ಒಳಗಾಗಿರುವ ನನ್ನ ತಂದೆ, ಪತ್ನಿ ಮತ್ತು ಮಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ತಮ್ಮ ಎಡೆಬಿಡದ ಕೆಲಸಕಾರ್ಯಗಳ ಮಧ್ಯೆ ನನ್ನ ಮತ್ತು ನನ್ನ ಕುಟುಂಬದ ಒಳಿತಿಗೆ ಕಾಳಜಿ ತೋರಿ ಶುಭ ಹಾರೈಸಿದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ’’ ಎಂದು ಡಾ. ಸುಧಾಕರ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಆದಾಯದ ಗುರಿ ನೀಡಿದ್ದ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ
ಸುಧಾಕರ್ ಅವರ ಮನೆಗೆಲಸದ ವ್ಯಕ್ತಿಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಚಿವರ ಇಡೀ ಕುಟುಂಬ ಕರೊನಾ ಪರೀಕ್ಷೆಗೆ ಸೋಮವಾರ ಹಾಜರಾಗಿತ್ತು. ಆ ಪೈಕಿ ಸಚಿವರ ತಂದೆ, ಚಿಕ್ಕಬಳ್ಳಾಪುರ ಜಿಪಂ ಸದಸ್ಯ ಪಿ.ಎನ್. ಕೇಶವರೆಡ್ಡಿ ಅವರ ವರದಿ ಸೋಮವಾರ ಮಧ್ಯಾಹ್ನ ಪಾಸಿಟಿವ್ ಬಂದಿತ್ತು. ತಮ್ಮ ಪತ್ನಿ ಮತ್ತು ಮಗಳ ವರದಿಯೂ ಪಾಸಿಟಿವ್ ಬಂದಿದ್ದನ್ನು ಸುಧಾಕರ್ ಅವರೇ ಮಂಗಳವಾರ ಬೆಳಗ್ಗೆ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದರು. ತಮ್ಮ ಹಾಗೂ ಇಬ್ಬರು ಪುತ್ರರ ವರದಿ ನೆಗೆಟಿವ್ ಬಂದಿದೆ ಎಂದೂ ತಿಳಿಸಿದ್ದರು. ನಂತರ ಸ್ವಇಚ್ಛೆಯಿಂದ ಹೋಮ್ ಕ್ವಾರಂಟೈನ್ ಆಗಿದ್ದಾರೆ.