ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಿವಿಜಯವಾಣಿ ಸುದ್ದಿಜಾಲ ಮಡಿಕೇರಿ
ರೈತರಿಗೆ ನೀಡುವಂತೆ ಮಾದರಿ ಕಾಫಿ ಬೆಳೆಗಾರರಿಗೂ 10 ಎಚ್‌ಪಿವರೆಗಿನ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸುವಂತೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ವೇಳೆ ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್‌ಗೆ ಈ ಸೂಚನೆ ನೀಡಿದರು. ಸುಂಟಿಕೊಪ್ಪ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಬಗ್ಗೆ ಸ್ಥಳೀಯರು ಸಚಿವರ ಗಮನ ಸೆಳೆದರು.
ಈಗಾಗಲೇ ಸಂಪರ್ಕ ಕಡಿತಗೊಳಿಸಿರುವ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಒದಗಿಸಬೇಕು. ಈ ವಿಷಯದಲ್ಲಿ ಉದ್ಧಟತನ ಪ್ರದರ್ಶಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಅವರಿಗೆ ಸಭೆ ನಡುವೆ ಮೊಬೈಲ್ಗೆ ಕರೆ ಮಾಡಿ, 10 ಎಚ್‌ಪಿವರೆಗಿನ ಪಂಪ್‌ಸೆಟ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಸೂಚನೆ ನೀಡಿದರು.
ಇಲ್ಲಿಯವರೆಗೆ ಏನಾಗಿದೆ ಗೊತ್ತಿಲ್ಲ. ನಾನು ಉಸ್ತುವಾರಿ ಸಚಿವನಾಗಿರುವವರೆಗೂ ಜನಪ್ರತಿನಿಧಿಗಳಿಗೆ ಮೊದಲ ಆದ್ಯತೆ ನೀಡುತ್ತೇನೆ. ಇದನ್ನು ಅಧಿಕಾರಿಗಳು ಗಮನದಲ್ಲಿಟ್ಟುಕೊಳ್ಳಬೇಕೆಂದರು. ಜನಸಾಮಾನ್ಯರು, ಬಡವರಿಗೆ ತೊಂದರೆಯಾದಲ್ಲಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.


ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರು ಪ್ರತಿಕೂಲ ಪರಿಸ್ಥಿತಿ ನಡುವೆಯೂ ತಾಳ್ಮೆಯಿಂದ ಇದ್ದಾರೆ ಅಂದರೆ ಅವರ ಒಳ್ಳೆತನ ಅರ್ಥ ಮಾಡಿಕೊಳ್ಳಬೇಕೆಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಕೃತಿ ವಿಕೋಪ ಹಾನಿ ಮತ್ತು ಪರಿಹಾರ ಕುರಿತು ನಡೆದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುರಕ್ಷಿತ ಸ್ಥಳದಲ್ಲಿ ಮನೆ ಕಟ್ಟಿಕೊಡಬೇಕು. ಮತ್ತೆ ಅನಾಹುತ ಆಗದಂತೆ ಎಚ್ಚರ ವಹಿಸಬೇಕೆಂದು ಸಲಹೆ ನೀಡಿದರು.
ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಕಳೆದೆರಡು ವರ್ಷದಲ್ಲಿ ಕೊಡಗಿನಲ್ಲಿ 1,750 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟಾಗಿದೆ ಎಂದು ಹೇಳಿದರು.
ಕರ್ಣಂಗೇರಿಯಲ್ಲಿ 35 ಮನೆ ಕಾಮಗಾರಿ ಪೂರ್ಣಗೊಂಡಿದ್ದು, 105 ಸಂತ್ರಸ್ತರು ಇಲ್ಲಿ ಮನೆಗೆ ಅರ್ಜಿ ಸಲ್ಲಿಸಿದ್ದಾರೆ. ಮದೆಯಲ್ಲಿ 80 (124 ಅರ್ಜಿ), ಜಂಬೂರಿನಲ್ಲಿ 518 (94 ಅರ್ಜಿ) ಮನೆ ಕಾಮಗಾರಿ ಪ್ರಗತಿಯಲ್ಲಿದೆ. 65 ಸಂತ್ರಸ್ತರ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಲು ಮೊದಲ ಕಂತಿನಲ್ಲಿ 2 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳ ಮೂಲಕ ಕೆಲಸ ಮಾಡುವುದು ನಿಲ್ಲಬೇಕು. ತಹಸೀಲ್ದಾರ್‌ಗಳು ಚುರುಕಾಗಿ ಕೆಲಸ ಮಾಡಬೇಕೆಂದು ತಹಸೀಲ್ದಾರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಿ ಆ್ಯಂಡ್ ಡಿ ಜಾಗ ಎಂಬ ಕಾರಣಕ್ಕಾಗಿ ಅಕ್ರಮ- ಸಕ್ರಮ ಸಮಿತಿ ಅರ್ಜಿ ತಿರಸ್ಕರಿಸಿರುವ ಬಗ್ಗೆ ಕೆ.ಜಿ. ಬೋಪಯ್ಯ ಗಮನ ಸೆಳೆದರು. ಇದನ್ನು ಮರು ಪರಿಶೀಲಿಸುವಂತೆ ಸಚಿವರು ಸೂಚಿಸಿದರು.
ಜನಸಾಮಾನ್ಯರಿದ್ದರೆ ಮಾತ್ರ ಸರ್ಕಾರ ಇರುತ್ತದೆ. ಒಳ್ಳೆಯ ಇತಿಹಾಸ ಹೊಂದಿರುವ ಕೊಡಗಿನಲ್ಲಿ ಕೆಲಸ ಮಾಡಲು ಸಿಕ್ಕ ಅವಕಾಶವನ್ನು ಅಧಿಕಾರಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಜಿಲ್ಲೆಯ ಸಮಸ್ಯೆ ಹಾಗೂ ಅಭಿವೃದ್ಧಿ ವಿಷಯಗಳು ಕುರಿತು ಚರ್ಚಿಸಲು ಉನ್ನತಾಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ತದನಂತರ ಜಿಲ್ಲೆಯಲ್ಲಿಯೂ ಸಭೆ ನಡೆಸಲಾಗುವುದೆಂದು ಸಚಿವ ವಿ. ಸೋಮಣ್ಣ ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಎಂ.ಪಿ. ಸುನೀಲ್ ಸುಬ್ರಮಣಿ, ಮೈಸೂರು- ಕೊಡಗು ಸಂಸದ, ಮಡಿಕೇರಿ ಶಾಸಕ, ರಾಜೀವ್‌ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮ್‌ಪ್ರಸಾದ್, ಎಸ್ಪಿ ಡಾ.ಡಿ.ಪಿ. ಸುಮನ್, ಸಿಇಒ ಕೆ.ಲಕ್ಷ್ಮೀಪ್ರಿಯಾ ಹಾಜರಿದ್ದರು.

ಅಮಾನತಿಗೆ ಸೂಚನೆ
ಪಾನಮತ್ತರಾಗಿ ಕಚೇರಿಗೆ ಬರುವ ನೌಕರರನ್ನು ತಕ್ಷಣ ಅಮಾನತು ಮಾಡುವಂತೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಉಪವಿಭಾಗಾಧಿಕಾರಿ ಜವರೇಗೌಡ ಅವರಿಗೆ ಸೂಚನೆ ನೀಡಿದರು.
ಗಾಳಿಬೀಡು, ಶಾಂತಳ್ಳಿ ಆರ್‌ಐಗಳು ಪಾನಮತ್ತರಾಗಿ ಕಚೇರಿಗೆ ಬರುತ್ತಾರೆಂದು ಶಾಸಕರು ಸಭೆಯಲ್ಲಿ ಗಮನ ಸೆಳೆದರು. ಇಂತಹ ನೌಕರರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಮಾದಾಪುರ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಪ್ರತಿಯೊಬ್ಬರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಮಡಿಕೇರಿ ಶಾಸಕರು ದೂರು ನೀಡಿದರು. ತಕ್ಷಣ ಅವರನ್ನು ಅಲ್ಲಿಂದ ವರ್ಗ ಮಾಡಿ ಎಂದು ಸಚಿವರು ಸೂಚನೆ ನೀಡಿದರು.

ಮಡಿಕೇರಿ ಜಿಲ್ಲೆ : ವಿ.ಸೋಮಣ್ಣ ಅವರಿಗೆ ಕೊಡಗು ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ನೀಡುವ ವೇಳೆ ಸರ್ಕಾರಿ ಆದೇಶದಲ್ಲಿ ಮಡಿಕೇರಿ ಜಿಲ್ಲೆ ಎಂದು ಉಲ್ಲೇಖಿತವಾಗಿತ್ತು. ಮಡಿಕೇರಿ ಜಿಲ್ಲೆ ಎಂದು ಉಲ್ಲೇಖಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿದ ಉಸ್ತುವಾರಿ ಸಚಿವರು, ಹಲವು ಬಾರಿ ಮಡಿಕೇರಿ ಜಿಲ್ಲೆ ಎಂದು ಹೇಳಿದರು. ಆದರೆ, ಇದನ್ನು ಸರಿಪಡಿಸುವ ಗೋಜಿಗೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹೋಗಲಿಲ್ಲ.

ಪಿಡಿಒಗಳು ಪಿಶಾಚಿಗಳು : 
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗಳು ಪಿಶಾಚಿಗಳೆಂದು ವಸತಿ ಸಚಿವ ವಿ. ಸೋಮಣ್ಣ ಅಸಮಾಧಾನ ವ್ಯಕ್ತ ಪಡಿಸಿದರು. ಈ ಪಿಡಿಒಗಳನ್ನು ಏಕೆ ನೇಮಕ ಮಾಡಿದ್ದೇವೆಂದು ಗೊತ್ತಾಗುತ್ತಿಲ್ಲ. ಅವರು ಪಿಶಾಚಿಗಳಂತೆ ವರ್ತಿಸುತ್ತಾರೆ. ಶೇ.5 ರಷ್ಟು ಪಿಡಿಒಗಳು ಮಾತ್ರ ಒಳ್ಳೆಯವರು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಸತಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುವುದು. ಎರಡು ವರ್ಷದಲ್ಲಿ ಮೈಸೂರು, ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮನೆ ನಿರ್ಮಿಸಲಾಗುವುದೆಂದು ಸಚಿವರು ಘೋಷಿಸಿದರು.
ಡಿಸಿಯಮ್ಮ, ಎಸ್ಪಿ ಅಮ್ಮ….
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಕೃತಿ ವಿಕೋಪ ಹಾನಿ- ಪರಿಹಾರ ಕುರಿತು ಸಭೆ ನಡೆಸಿದ ಉಸ್ತುವಾರಿ ಸಚಿವ ವಿ. ಸೋಮಣ್ಣ ತಮ್ಮ ಮಾತಿನ ಶೈಲಿ ಮೂಲಕ ಗಮನ ಸೆಳೆದರು. ಪದೇ ಪದೆ ಡಿಸಿಯಮ್ಮ…. ನೋಡಮ್ಮ… ಹೀಗೆ ಮಾಡಬೇಕಮ್ಮ ಎಂದು ಹೇಳುತ್ತಿದ್ದರು.
ಎಸ್ಪಿ ಅಮ್ಮ ನಿಮ್ಮ ಬಗ್ಗೆ ಎಲ್ಲೆಡೆಯಿಂದ ಒಳ್ಳೆಯ ಅಭಿಪ್ರಾಯ ಬರುತ್ತಿದೆ. ಪ್ರತಿಯೊಬ್ಬರ ಮೇಲೂ ಜಾತಿ ನಿಂದನೆ ಕೇಸ್ ಹಾಕುತ್ತಿರುವ ಮಾದಾಪುರ ಆಸ್ಪತ್ರೆ ಆರೋಗ್ಯಾಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳಬೇಕಮ್ಮ ಎಂದು ಸೂಚನೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಪರಿಚಯ ಮಾಡುವ ವೇಳೆ… ಎಲ್ಲ ಮಹಿಳಾ ಅಧಿಕಾರಿಗಳು ಒಂದೇ ರೀತಿ ಇದ್ದೀರಾ. ಹೈಕ್ಲಾಸ್ ಆಗಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


Leave a Reply

Your email address will not be published. Required fields are marked *