ಸಚಿವ ಸಾರಾ ಗ್ರಾಮ ವ್ಯಾಸ್ತವ್ಯ

ಕೆ.ಆರ್.ನಗರ: ಈ ಅಧಿವೇಶನದ ಒಳಗೆ ರೈತರಿಗೆ ಸಾಲ ತೀರುವಳಿ ಪತ್ರವನ್ನು ವಿತರಿಸಲಾಗುವುದು ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದರು.

ತಾಲೂಕಿನ ಹನಸೋಗೆ ಗ್ರಾ.ಪಂ.ವ್ಯಾಪ್ತಿಯ ಕರ್ತಾಳು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಗ್ರಾಮಸ್ಥರಿಂದ ಮನವಿಗಳನ್ನು ಸ್ವೀಕರಿಸಿ ಮಾತನಾಡಿದರು.

ಅದೇ ಗ್ರಾಮದ ಕುಂಬಾರ ಸಮಾಜದ ಗೋವಿಂದಶೆಟ್ಟಿ ಎಂಬುವರ ಮನೆಯಲ್ಲಿ ಶುಕ್ರವಾರ ವಾಸ್ತವ್ಯ ಹೂಡಿ ಶನಿವಾರ ಬೆಳಗ್ಗೆ ತಂದ್ರೆ, ಗ್ರಾಮಗಳಲ್ಲಿ ಜನಸಾಮಾನ್ಯರ ಅಹವಾಲುಗಳನ್ನು ಸ್ವೀಕರಿಸಿದರು. ನಂತರ ಹನಸೋಗೆ ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿದರು.

ಪ್ರಕೃತಿ ವಿಕೋಪಗಳಲ್ಲಿ ಬೆಳೆ ಬೆಳೆಯುವುದೇ ಕಷ್ಟ. ಅನುಮತಿಯಿಲ್ಲದ ಹೊಗೆಸೊಪ್ಪನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ರೈತರಿಗೆ ತೊಂದರೆ ಕೊಡಬಾರದೆಂದು ತಿಳಿಸಲಾಗಿದೆ. ಅದೇ ರೀತಿ ಕಿರುಕುಳ ಮುಂದುವರಿಸಿದರೆ ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಸಿದರು.

ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ: ರೈತರ ಜೀವನಾಡಿಯಾಗಿದ್ದ ಶ್ರೀರಾಮ ಸಕ್ಕರೆ ಕಾರ್ಖಾನೆಯ ನೌಕರರಿಗೆ ನೀಡಬೇಕಿದ್ದ ವೇತನವನ್ನು ಕೊಡಿಸಲಾಗಿದ್ದು, ಡಿ.8 ರಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಟೆಂಡರ್ ಮಾಡುವ ಮೂಲಕ ಮತ್ತೆ ಕಾರ್ಖಾನೆ ಆರಂಭಿಸಲು ಕ್ರಮಕೈಗೊಳ್ಳಲಾಗುವುದು ತಿಳಿಸಿದರು.

ಹಾರಂಗಿಯಿಂದ ಆನಂದೂರು ಕೆರೆಗೆ ನೀರು ತುಂಬಿಸಿ ನಾಲೆಗಳ ಮೂಲಕ ಹನಸೋಗೆ ಭಾಗದಿಂದ ಕೆಸ್ತೂರು ಕೊಪ್ಪಲು ಹಂತದವರೆಗೆ ಬೇಸಿಗೆ ಬೆಳೆಗೆ ನೀರು ನೀಡಲು ಕೆರೆಯಿಂದ ನಾಲೆಗಳಿಗೆ ನೀರು ಲಿಫ್ಟ್ ಮಾಡಲು ಕೆಲಸ ಮಾಡಿಕೊಡಲಾಗುವುದು. ಹನಸೋಗೆಗೆ 32 ಲಕ್ಷ ರೂ.ವೆಚ್ಚದಲ್ಲಿ ಪಶುವೈದ್ಯ ಆಸ್ಪತ್ರೆ, 6 ಕೋಟಿ ರೂ.ವೆಚ್ಚದಲ್ಲಿ ಕೆಇಬಿ ಸಬ್ ಸ್ಟೇಷನ್ ನಿರ್ಮಾಣ, 1ಕೋಟಿ ರೂ.ವೆಚ್ಚದಲ್ಲಿ ಬಸ್ ನಿಲ್ದಾಣ. ಹನಸೋಗೆ ಗಡಿಭಾಗದಿಂದ ಹೊಸೂರಿನವರೆಗೆ 31 ಕೋಟಿ ರೂ.ವೆಚ್ಚದಲ್ಲಿ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಮಾಡಲಾಗುವುದು.

ಹನಸೋಗೆ ಮತ್ತು ಪಟ್ಟಣದ ಮಧುವನಹಳ್ಳಿ ಎರಡು ಜಾಗದಲ್ಲೂ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಒಂದು ತಿಂಗಳವೊಳಗೆ ಮುಗಿಸುವಂತೆ ಸಂಬಂಧಿಸಿ ಅಧಿಕಾರಿಗಳಿಗೆ ತಿಳಿಸಿದರು.

ಚುಂಚನಕಟ್ಟೆಯಲ್ಲಿ 25 ಅಡಿ ಎತ್ತರದ ಆಂಜನೇಯ ಪ್ರತಿಮೆಯನ್ನ 8.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಸೀಮಂತ ಕಾರ್ಯಕ್ರಮ, ಉಚಿತ ನೋಟ್ ಬುಕ್ ವಿತರಣೆ, ಉಚಿತ ಆಂಬುಲೆನ್ಸ್, ಬಸ್ ಪಾಸ್ ವಿತರಣೆ, ಅಂಗವಿಕಲರಿಗೆ ವಿಮೆ ಸೌಲಭ್ಯಗಳನ್ನು ನೀಡುವ ಕಾರ್ಯಕ್ರಮಗಳು ಮುಂದುವರಿಯಲಿದೆ ಎಂದರು.

ಗ್ರಾಮವಾಸ್ತವ್ಯ ನಮ್ಮ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಕೂಸಾಗಿದ್ದು ಸರ್ಕಾರವೇ ನಿಮ್ಮ ಮನೆ ಬಾಗಿಲೆಗೆ ಬಂದಿದ್ದು ನಿಮ್ಮ ಸಮಸ್ಯೆಗಳನ್ನು ಸ್ಥಳದಲ್ಲೇ ಮತ್ತು ಶೀಘ್ರವಾಗಿ ಕಾನೂನಾತ್ಮಕವಾಗಿ ಬಗೆಹರಿಸುವ ಕೆಲಸವನ್ನು ಮಾಡುತ್ತೇವೆ ಎಂದರು. ಇಂದಿನಿಂದ ಜಾರಿಗೆ ಬರುವಂತೆ 500 ರೂ.ಗಳ ಮಾಸಿಕ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ಮಾಶಾಸನಗಳನ್ನು 1 ಸಾವಿರ ರೂ.ಗಳಿಗೆ ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಮಾಡಲಾಗುವುದು. ಡಿ.15 ರಂದು ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗುವುದು.

ಕೊಡಗಿನ ನಿರಾಶ್ರಿತರಾದ 815 ಕುಟುಂಬಗಳಿಗೆ ನಮ್ಮ ಸರ್ಕಾರದಿಂದ 38 ಕೋಟಿ ರೂ.ಅನುದಾನ ನೀಡಿ ತಲಾ 9.80 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದ್ದು, ಈಗಾಗಲೇ ಅಂತವರಿಗೆ ಪ್ರತಿ ತಿಂಗಳು 10 ಸಾವಿರ ರೂ.ಗಳನ್ನು ಬಾಡಿಗೆ ರೂಪದಲ್ಲಿ ಅವರಿಗೆ ನೀಡಲಾಗುತ್ತಿದೆ.

ಜಿಪಂ ಸದಸ್ಯೆ ವೀಣಾಕೀರ್ತಿ, ತಾಪಂ ಸದಸ್ಯೆ ಸುನಿತಾ ದಿನೇಶ್, ಗ್ರಾಪಂ ಅಧ್ಯಕ್ಷ ರಾಜೇಶ್, ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಯುವ ಜೆಡಿಎಸ್ ಅಧ್ಯಕ್ಷ ಮಧುಚಂದ್ರ, ಮುಖಂಡ ಹನಸೋಗೆ ನಾಗರಾಜ್, ಟಿಎಪಿಸಿಎಂಎಸ್ ನಿರ್ದೇಶಕ ಕೀರ್ತಿ, ಸಹಾಯಕ ಜಿಲ್ಲಾಧಿಕಾರಿ ಯೋಗೀಶ್, ಜಿಪಂ ಉಪ ಕಾರ್ಯದರ್ಶಿ ಶಿವಶಂಕರ್, ಡಿಟಿಒ ದಶರಥ, ತಹಸೀಲ್ದಾರ್ ನಾಗ ಪ್ರಸಾದ್, ಇಒ ಲಕ್ಷ್ಮೀಮೋಹನ್, ಸಿಡಿಪಿಒ ಸುಮಿತ್ರಾ, ಬಿಇಒ ಎಂ.ರಾಜು, ಅಬಕಾರಿ ನಿರೀಕ್ಷಕಿ ಎಚ್.ಡಿ.ರಮ್ಯ, ವಲಯ ಅರಣ್ಯಾಧಿಕಾರಿ ಕುಮಾರ್, ಸಿಪಿಐ ಕೆ.ಕೆ.ರಘು, ಪಿಡಿಒ ಚನ್ನಪ್ಪ ಮತ್ತಿತರರು ಹಾಜರಿದ್ದರು.