ಮಾಜಿ ಶಾಸಕರ ಮನೆಗೆ ಸಚಿವ ರೇವಣ್ಣ ಭೇಟಿ, ಮೈತ್ರಿ ಧರ್ಮ ಪಾಲನೆ ವಿಶ್ವಾಸ

ಕೆ.ಆರ್.ಪೇಟೆ: ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್ ಅವರ ಮನೆಗೆ ಸಚಿವ ರೇವಣ್ಣ, ಶಾಸಕ ಬಾಲಕೃಷ್ಣ ಭೇಟಿ ನೀಡಿ ಮೈತ್ರಿ ಅಭ್ಯರ್ಥಿ ನಿಖಿಲ್ ಪರವಾಗಿ ಮತಯಾಚಿಸುವಂತೆ ಕೋರಿದರು.

ಭಾನುವಾರ ರಾತ್ರಿ ಕೆ.ಬಿ.ಚಂದ್ರಶೇಖರ್ ಅವರ ಮನೆಗೆ ಭೇಟಿ ನೀಡಿ ಮನವಿ ಮಾಡಿದ ನಂತರ, ರೆಹಮಾನ್ ಖಾನ್ ಸಹೋದರ ಯೂನಸ್ ಖಾನ್ ಮನೆಗೆ ಭೇಟಿ ನೀಡಿದರು. ಮತ್ತೊಬ್ಬ ಮಾಜಿ ಶಾಸಕ ಬೊಮ್ಮನಹಳ್ಳಿ ಬಿ.ಪ್ರಕಾಶ್ ಮನೆಗೆ ಭೇಟಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೇವಣ್ಣ, ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮೈತ್ರಿ ಮಾಡಿಕೊಳ್ಳಲಾಗಿದೆ. ಎಲ್ಲರೂ ಮೈತ್ರಿ ಧರ್ಮ ಪಾಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಶಾಸಕ ಗೈರು: ಸಚಿವ ರೇವಣ್ಣ ಕೆ.ಆರ್.ಪೇಟೆಗೆ ಬಂದು ಮಾಜಿ ಶಾಸಕರ ಮನೆಗೆ ಭೇಟಿ ನೀಡಿದರೆ, ಪಟ್ಟಣದ ನಿವಾಸದಲ್ಲೇ ಇದ್ದ ಶಾಸಕ ನಾರಾಯಣಗೌಡ ಅವರ ಜತೆಯಲ್ಲಿ ತೆರಳಲಿಲ್ಲ. ಇದು ಸ್ಥಳೀಯ ಮಟ್ಟದಲ್ಲಿ ದೋಸ್ತಿಗಳ ನಡುವೆ ಮನಸ್ತಾಪ ಮಾಸಿಲ್ಲ ಎಂಬುದಕ್ಕೆ ಸಾಕ್ಷಿಯಾಯಿತು.